ಮಡಿಕೇರಿ, ಮಾ. ೨೩: ಗಣಪತಿ ಬೀದಿ ರಸ್ತೆ ಕಾಮಗಾರಿ ವಿಳಂಬವಾಗುತ್ತಿರುವ ವಿಚಾರ ನಗರಸಭಾ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಗೊಂಡು ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ವಾಕ್ಸಮರ ಏರ್ಪಟ್ಟು ಗದ್ದಲಕ್ಕೆ ಕಾರಣವಾಯಿತು.
ನಗರಸಭಾ ಅಧ್ಯಕ್ಷೆ ಅನಿತಾಪೂವಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಪಕ್ಷ ಸದಸ್ಯರುಗಳಾದ ಅಮೀನ್ ಮೊಯ್ಸಿನ್ ಹಾಗೂ ಮನ್ಸೂರ್ ಇವರುಗಳು ಗಣಪತಿ ಬೀದಿ ರಸ್ತೆ ಕಾಮಗಾರಿ ವಿಳಂಬವಾಗುತ್ತಿದ್ದು, ಅಲ್ಲಿನ ಜನತೆ ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಭೆ ಅಜೆಂಡಾ ಪ್ರಕಾರ ನಡೆಯಲಿ; ಗಣಪತಿ ಬೀದಿ ರಸ್ತೆ ಕಾಮಗಾರಿ ವಿಚಾರವನ್ನು ಇತರ ವಿಚಾರಗಳ ಚರ್ಚೆ ಸಂದರ್ಭ ಮಾತನಾಡೋಣ ಎಂದು ಅನಿತಾ ಪೂವಯ್ಯ ಮನವಿ ಮಾಡಿದರೂ ಒಪ್ಪದ ಅಮಿನ್ ಮೊಯ್ಸಿನ್ ಗಣಪತಿ ಬೀದಿ ವಿಚಾರ ಬಹಳ ಗಂಭೀರ ವಿಷಯವಾಗಿದ್ದು, ಆರಂಭದಲ್ಲೇ ಆ ಬಗ್ಗೆ ಚರ್ಚೆ ನಡೆಯಬೇಕೆಂದು ಪಟ್ಟು ಹಿಡಿದರು.
ಗಣಪತಿ ಬೀದಿ ರಸ್ತೆ ಕಾಮಗಾರಿ ಸಂಬAಧ ಒಂದು ತೀರ್ಮಾನ ತೆಗೆದುಕೊಳ್ಳದಿದ್ದರೆ ಸಭೆ ಮಾಡಲು ನಾವು ಬಿಡುವುದಿಲ್ಲ ಎಂದು ಮನ್ಸೂರ್ ಹೇಳಿದರು. ಇದರಿಂದ ಆಕ್ರೋಶಗೊಂಡ ಬಿಜೆಪಿ ಸದಸ್ಯರುಗಳಾದ ಅರುಣ್ ಶೆಟ್ಟಿ, ಕೆ.ಎಸ್. ರಮೇಶ್, ಮಹೇಶ್ ಜೈನಿ ಸಭೆ ನಡೆಸಲು ಬಿಡುವುದಿಲ್ಲ ಎಂಬ ಮಾತನ್ನು ಹೇಳಬೇಡಿ. ಸಭೆಯಲ್ಲಿ ಎಲ್ಲಾ ವಾರ್ಡ್ಗಳ ಸಮಸ್ಯೆ ಬಗ್ಗೆ ಚರ್ಚೆಯಾಗಬೇಕು ಎಂದು ಹರಿಹಾಯ್ದರು.
ಗಣಪತಿ ಬೀದಿ ವಿಚಾರದಲ್ಲಿ ಅಧ್ಯಕ್ಷರು ತಾರತಮ್ಯ ಮಾಡುತ್ತಿದ್ದಾರೆ ಎಂದು ಮನ್ಸೂರ್ ಆರೋಪಿಸಿದಾಗ ಕೆರಳಿದ ಅನಿತಾ ಪೂವಯ್ಯ, ನನಗೆ ಎಲ್ಲಾ ವಾರ್ಡ್ಗಳ ಅಭಿವೃದ್ಧಿಯೂ ಮುಖ್ಯವಾಗಿದ್ದು, ತಾರತಮ್ಯ ಮಾಡುವ ಅವಶ್ಯಕತೆ ನನಗಿಲ್ಲ. ಗಣಪತಿ ಬೀದಿ ಸಮಸ್ಯೆ ಬಗ್ಗೆ ನನಗೂ ಕಾಳಜಿ ಇದೆ. ಅಲ್ಲಿನ ಸಮಸ್ಯೆಯನ್ನು ಬಗೆಹರಿಸುತ್ತೇವೆ. ವಿನಾಕಾರಣ ಕಿರುಚಾಡಬೇಡಿ ಎಂದು ಹೇಳಿದರು.
ಕೇವಲ ಗಣಪತಿ ಬೀದಿ ಮಾತ್ರವಲ್ಲ ಎಲ್ಲಾ ವಾರ್ಡ್ಗಳ ಸಮಸ್ಯೆ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿ ಎಂದು ಸದಸ್ಯ ಅಪ್ಪಣ್ಣ ಒತ್ತಾಯಿಸಿದರು. ಚರ್ಚೆಗಳು ಆರೋಗ್ಯಕರವಾಗಿ ನಡೆಯಲಿ; ಗೊಂದಲ ಸೃಷ್ಟಿಸುವುದು ಬೇಡ ಎಂದು ಮತ್ತೋರ್ವ ಸದಸ್ಯ ಎಸ್.ಸಿ. ಸತೀಶ್ ಹೇಳಿದರು. ನಗರಸಭಾ ಸದಸ್ಯರುಗಳ ಸಮಸ್ಯೆ ಬಗ್ಗೆ ಅಜೆಂಡಾದಲ್ಲಿ ಪ್ರಸ್ತಾಪಿಸಿದರೆ ಈ ರೀತಿಯ ಗೊಂದಲ ಸೃಷ್ಟಿಯಾಗುವುದಿಲ್ಲ ಎಂದು ಕಾಂಗ್ರೆಸ್ ಸದಸ್ಯ ರಾಜೇಶ್ ಯಲ್ಲಪ್ಪ ಹೇಳಿದರು.
ಗಣಪತಿ ಬೀದಿಯಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸುವ ಸಂಬAಧ ಗುತ್ತಿಗೆದಾರರಿಗೆ ಕೆಲಸ ವಹಿಸಿದ್ದ ವಿಚಾರದಲ್ಲಿ ತಾಂತ್ರಿಕ ಸಮಸ್ಯೆಯಿಂದ ಆ ಕಾರ್ಯ ವಿಳಂಬವಾಗಿತ್ತು. ಇದೀಗ ಆ ಸಮಸ್ಯೆಯನ್ನು ಸರಿಪಡಿಸಿ, ರಸ್ತೆ ಕಾಮಗಾರಿಯನ್ನು ಶೀಘ್ರ ಕೈಗೊಳ್ಳುವಂತೆ ಸಭೆ ಸೂಚಿಸಿತು. ಗುತ್ತಿಗೆಯಲ್ಲಿನ ತಾಂತ್ರಿಕ ಸಮಸ್ಯೆ ಬಗ್ಗೆ ಸದಸ್ಯರಾದ ಅಪ್ಪಣ್ಣ, ಅಮಿನ್‌ಮೊಯ್ಸಿನ್ ಮತ್ತಿತರರು ಅಧಿಕಾರಿಯೊಂದಿಗೆ ಚರ್ಚೆ ನಡೆಸಿದರು.
ನಗಸಭೆಯಿಂದ ನನ್ನ ವಾರ್ಡ್ನಲ್ಲಿ ಕೆಲಸಗಳಾಗುತ್ತಿಲ್ಲ. ಯಾವುದೇ ಟೆಂಡರ್ ಕೂಡ ಕರೆದಿಲ್ಲ. ತಾರತಮ್ಯ ಮಾಡಲಾಗುತ್ತಿದೆ ಎಂದು ಮನ್ಸೂರ್ ಆರೋಪಿಸಿದರೆ, ಅಭಿವೃದ್ಧಿ ವಿಚಾರದಲ್ಲಿ ಯಾವುದೇ ತಾರತಮ್ಯವಾಗುತ್ತಿಲ್ಲ ಎಂದು ಜೆಡಿಎಸ್ ಸದಸ್ಯ ಮುಸ್ತಫ ಸಮರ್ಥಿಸಿದರು. ರಾಜೇಶ್ ಯಲ್ಲಪ್ಪ ಮಾತನಾಡಿ, ವಾರ್ಡ್ಗಳಿಗೆ ಅನುದಾನ ಹಂಚಿಕೆ ಬಗ್ಗೆ ಮಾಹಿತಿ ನೀಡಬೇಕು. ಎಲ್ಲಾ ಸದಸ್ಯರನ್ನು ಸಮಾನವಾಗಿ ಪರಿಗಣಿಸಬೇಕು. ಅನುದಾನವನ್ನು ಎಲ್ಲಾ ವಾರ್ಡ್ಗಳಿಗೂ ಸಮವಾಗಿ ಹಂಚಿಕೆ ಮಾಡಲಾಗಿದೆಯೆ; ಪ್ರಾಮಾಣಿಕವಾಗಿ ಹೇಳಿ ಎಂದು ಪ್ರಶ್ನಿಸಿದರು. ಪ್ರತಿವಾರ್ಡ್ಗಳಿಗೆ ಅಗತ್ಯಕ್ಕೆ ತಕ್ಕಂತೆ ಆದ್ಯತೆ ಮೇರೆಗೆ ಅನುದಾನ ಹಂಚಿಕೆಯಾಗಿದೆ ಎಂದು ಬಿಜೆಪಿ ಸದಸ್ಯರು ಹೇಳಿದರು. ನಮ್ಮಲ್ಲೂ ಅತ್ಯಗತ್ಯವಾಗಿ ಆಗಬೇಕಾದ ಕೆಲಸಗಳಿವೆ. ಆ ಬಗ್ಗೆಯೂ ಗಮನಹರಿಸಬೇಕೆಂದು ರಾಜೇಶ್ ಯಲ್ಲಪ್ಪ ಒತ್ತಾಯಿಸಿದರು.
ನಗರಸಭೆ ಒಳಪಡುವ ಕುರಿ, ಕೋಳಿ, ಹಸಿ ಮೀನು ವ್ಯಾಪಾರ ಮಳಿಗೆಗಳು ಶಿಥಿಲವಾಗಿದ್ದು, ಸರಿಪಡಿಸಲು ಸಭೆಯಲ್ಲಿ ಚರ್ಚಿಸಲಾಯಿತು. ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಪ್ರಸ್ತುತ ಇರುವ ಮಳಿಗೆಯನ್ನು ಕೆಡವಿ ಅದೇ ಜಾಗದಲ್ಲಿ ನೂತನ ಮಳಿಗೆಗಳ ನಿರ್ಮಾಣ ಮಾಡಲಾಗುತ್ತದೆ. ಅಲ್ಲಿವರೆಗೂ ಮಾರುಕಟ್ಟೆಯಲ್ಲಿ ತಾತ್ಕಾಲಿಕವಾಗಿ ಮಳಿಗೆಗಳನ್ನು ನೀಡಲಾಗುವುದು ಎಂದರು.
ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರ ವೈದ್ಯಕೀಯ ವೆಚ್ಚ ಸಂಬAಧ ನಗರಸಭೆಯಿಂದ ನೆರವು ನೀಡಲು ರೂ. ೫೦ ಲಕ್ಷ ಅನುದಾನವನ್ನು ಮೀಸಲಿಡುವಂತೆ ಸದಸ್ಯ ಅಮಿನ್‌ಮೊಯ್ಸಿನ್ ಮನವಿ ಮಾಡಿದರು. ಸಭೆಯ ಆರಂಭದಲ್ಲಿ ಇತ್ತೀಚೆಗೆ ಹುತಾತ್ಮರಾದ ಯೋಧ ಅಲ್ತಾಫ್ ಅವರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅಲ್ತಾಫ್ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು ಎಂದು ಅಮಿನ್ ಮೊಯ್ಸಿನ್ ಹೇಳಿದರು. ನಗರಸಭಾ ಆಯುಕ್ತ ರಾಮದಾಸ್, ಉಪಾಧ್ಯಕ್ಷೆ ಸವಿತಾ ರಾಕೇಶ್ ಇದ್ದರು.