ಸೋಮವಾರಪೇಟೆ, ಮಾ. ೨೪: ಹಣವನ್ನು ಪಣವಾಗಿಟ್ಟು ಕೋಳಿಗಳನ್ನು ಬಳಸಿಕೊಂಡು ಅಕ್ರಮವಾಗಿ ಜೂಜಾಟ ನಡೆಯುತ್ತಿದ್ದ ಅಡ್ಡೆಯ ಮೇಲೆ ಸೋಮವಾರಪೇಟೆ ಪೊಲೀಸರು ಧಾಳಿ ನಡೆಸಿದ್ದು, ಕಾಳಗಕ್ಕೆ ಸಿದ್ಧವಾಗಿದ್ದ ಐದು ಹುಂಜಗಳ ಸಹಿತ ಜೂಜಾಟದಲ್ಲಿ ತೊಡಗಿದ್ದ ಮೂವರನ್ನು ವಶಕ್ಕೆ ಪಡೆದು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
ಪಟ್ಟಣ ಸಮೀಪದ ಹಾನಗಲ್ಲು ಗ್ರಾಮದಿಂದ ಬಗ್ಗನಮನೆ ಸಂಪರ್ಕ ರಸ್ತೆಯಲ್ಲಿರುವ ಕಾಳನಕುಂಬ್ರಿ ಎಸ್ಟೇಟ್ ಬಳಿಯಲ್ಲಿ ಹುಂಜಗಳನ್ನು ಬಳಸಿಕೊಂಡು ಅಕ್ರಮವಾಗಿ ಜೂಜಾಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್ ನೇತೃತ್ವದ ತಂಡ ಧಾಳಿ ನಡೆಸಿದೆ.
ಈ ಸಂದರ್ಭ ಜೂಜಾಟದಲ್ಲಿ ತೊಡಗಿದ್ದವರು ಹಾಗೂ ನೋಡುತ್ತಿದ್ದವರು ಎದ್ದೂ ಬಿದ್ದು ಓಡಿದ್ದು, ಸ್ಥಳದಲ್ಲಿ ಸಿಕ್ಕಿದ ಬೇಳೂರಿನ ವಸಂತ, ಮಡಿಕೇರಿಯ ನಾರಾಯಣ, ಪಟ್ಟಣದ ಚಿನ್ನಸ್ವಾಮಿ ಅವರುಗಳ ಸಹಿತ, ಜೂಜಿನ ಕಾಳಗಕ್ಕೆ ತರಲಾಗಿದ್ದ ಐದು ಹುಂಜ ಕೋಳಿಗಳು, ಎರಡು ವಾಹನ, ಮೂರು ಬೈಕ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಘಟನೆಗೆ ಸಂಬAಧಿಸಿದAತೆ ಹಾನಗಲ್ಲು ಹಾಗೂ ಪಟ್ಟಣ ಸುತ್ತಮುತ್ತಲ ನಿವಾಸಿಗಳಾದ ಚಂದ್ರ, ಮರ್ವಿನ್, ಹರಿಪ್ರಸಾದ್, ಮಂಜು, ಕಾರ್ತಿಕ್, ಅರುಣ, ಅಣ್ಣಯ್ಯ, ಇಬ್ರಾಹಿಂ ಸೇರಿದಂತೆ ಇತರರು ಸ್ಥಳದಿಂದ ಪರಾರಿಯಾಗಿದ್ದು, ಇವರುಗಳ ವಿರುದ್ಧವೂ ಪಟ್ಟಣ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.
ಕೋಳಿಗಳ ಹರಾಜು: ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದು, ವಶಪಡಿಸಿಕೊಳ್ಳಲಾದ ೫ ಹುಂಜ ಕೋಳಿಗಳನ್ನು ಹರಾಜು ಹಾಕುವಂತೆ ನ್ಯಾಯಾಲಯ ಆದೇಶ ನೀಡಿದೆ. ಅದರಂತೆ ತಾ. ೨೫ರಂದು (ಇಂದು) ಪೂರ್ವಾಹ್ನ ೧೧.೩೦ಕ್ಕೆ ಸೋಮವಾರಪೇಟೆ ಪೊಲೀಸ್ ಠಾಣಾ ಆವರಣದಲ್ಲಿ ಜೂಜಾಟಕ್ಕೆ ಬಳಕೆಯಾಗಿದ್ದ ೫ ಹುಂಜಗಳ ಹರಾಜು ನಡೆಯಲಿದೆ!