ವೀರಾಜಪೇಟೆ, ಮಾ. ೨೩: ಗ್ರಾಹಕರ ಹಕ್ಕುಗಳಿಗೆ ಚ್ಯುತಿ ಬಾರದಹಾಗೆ ಸರಿಯಾದ ಹಕ್ಕು ಸಿಗಬೇಕು. ಮಾನವ ಹಕ್ಕುಗಳಿಗೋಸ್ಕರ ೧೯೪೮ರಲ್ಲೆ ಹೋರಾಟಗಳು ನಡೆದಿವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ಜಿ. ಲೋಕೇಶ್ ಹೇಳಿದರು.

‘ವಿಶ್ವ ಗ್ರಾಹಕ ಹಕ್ಕುಗಳ ದಿನಾಚರಣೆ' ಪ್ರಯುಕ್ತ ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ವಕೀಲರ ಸಂಘದ ಅಧ್ಯಕ್ಷ ಐ.ಆರ್. ಪ್ರಮೋದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಹಕರು ವೇದಿಕೆಗೆ ಅರ್ಜಿ ಸಲ್ಲಿಸುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬಹುದು ಎಂದರು. ಪ್ರಧಾನ ಸಿವಿಲ್ ನ್ಯಾಯಾಧೀಶ ಎನ್.ವಿ. ಕೋನಪ್ಪ ಅವರು ಗ್ರಾಹಕರ ದಿನಾಚರಣೆಯನ್ನು ೧೯೮೩ ರಿಂದ ಆಚರಿಸಿಕೊಂಡು ಬರುತ್ತಿದ್ದು, ಈ ದಿನಾಚರಣೆ ಮತ್ತು ಹಕ್ಕುಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವಂತೆ ಹೇಳಿದರು. ವೇದಿಕೆಯಲ್ಲಿ ಅಪರ ಸಿವಿಲ್ ನ್ಯಾಯಾಧೀಶೆ ಸಿ. ಮಹಾಲಕ್ಷಿö್ಮ, ವಕೀಲರ ಸಂಘದ ಗೌರವ ಕಾರ್ಯದರ್ಶಿ ಎಂ.ಕೆ. ದಿನೇಶ್ ಉಪಸ್ಥಿತರಿದ್ದರು. ಪ್ರಥಮ ದರ್ಜೆ ಸಹಾಯಕ ಬಿ.ಎಸ್. ಜಯಪ್ಪ ಸ್ವಾಗತಿಸಿದರು.