ವೀರಾಜಪೇಟೆ, ಮಾ. ೨೨: ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಇತ್ತೀಚೆಗೆ ಆರ್ಜಿ ಗ್ರಾಮದ ವಾಲ್ಮೀಕಿ ಭವನದಲ್ಲಿ ಆಯೋಜಿಸಲಾಗಿದ್ದ ಗ್ರಾಮವಾಸ್ತವ್ಯ ಸಭೆಯಲ್ಲಿ ಕೇಳಿಬಂದ ಗೋಮಾಳ ಒತ್ತುವರಿ ಆರೋಪದ ಹಿನ್ನೆಲೆ ಜಾಗ ಸ್ವಾಧೀನಪಡಿಸಿಕೊಂಡವರು ಒತ್ತುವರಿ ಜಾಗವನ್ನು ಸ್ವಯಂ ಪ್ರೇರಿತವಾಗಿ ತೆರವುಗೊಳಿಸಲು ಸಹಕಾರ ನೀಡಿದರು.

ಒತ್ತುವರಿಯಾಗಿದ್ದ ಒಂಬತ್ತು ಎಕರೆ ಗೋಮಾಳ ಜಾಗವನ್ನು ಕೆ.ಎಸ್ ರವಿರಾಜ್ ಅವರು ಸ್ವಯಂಪ್ರೇರಿತರಾಗಿ ತೆರವುಗೊಳಿಸಲು ಅನುವು ಮಾಡಿಕೊಟ್ಟರು. ತಹಶೀಲ್ದಾರ್ ಅವರ ನೇತೃತ್ವದಲ್ಲಿ ಸಭೆಯ ನಂತರ ತೆರವು ಕಾರ್ಯಾಚರಣೆ ನಡೆಯಿತು. ರವಿರಾಜ್ ಅವರು ಒತ್ತುವರಿ ಆಗಿದ್ದ ಜಾಗವನ್ನು ಸರ್ಕಾರದ ವಶಕ್ಕೆ ಒಪ್ಪಿಸುವ ಮೂಲಕ ಮಾದರಿಯಾದರು.

ಸಭೆಯಲ್ಲಿ ಮಾತನಾಡಿದ ಗ್ರಾಮಸ್ಥರು, ಗ್ರಾಮದ ಮೀಸಲು ಅರಣ್ಯ ಪ್ರದೇಶ ವೀರಾಜಪೇಟೆ ಹಾಗೂ ಮಾಕುಟ್ಟ ವಲಯಕ್ಕೆ ಸೇರಿದೆ. ಸರ್ವೇ ನಂಬರ್ ೩೩೩/೧ಪಿ೧ರ ಪ್ರಕಾರ ೧೭೫.೨೫ ಎಕರೆಯ ಪೈಕಿ ೩೫ ಎಕರೆ ಜಾಗವನ್ನು ರೆಸಾರ್ಟ್ ನಡೆಸುತ್ತಿರುವ ಹೊರಜಿಲ್ಲೆಯ ವ್ಯಕ್ತಿ ಒತ್ತುವರಿ ಮಾಡಿಕೊಂಡು ಅದರಲ್ಲಿ ಪ್ರವಾಸಿಗರಿಗೆ ಚಾರಣ ಮುಂತಾದ ಪ್ರವಾಸಿ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ದೂರಿದರು.

ಈ ಕುರಿತು ತಹಶೀಲ್ದಾರ್, ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಕೇಳಿದರು. ಈ ಸರ್ವೆ ನಂಬರ್‌ನಲ್ಲಿ ಒಂಬತ್ತು ಎಕರೆ ಒತ್ತುವರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಕಾಫಿ ತೋಟ ಮಾಡುತ್ತಿದ್ದ ವ್ಯಕ್ತಿ ಸ್ವಯಂ ನಿರ್ಧಾರದಿಂದ ಸರ್ಕಾರಕ್ಕೆ ಭೂಮಿಯನ್ನು ಮರಳಿಸಿದ್ದಾರೆ. ಉಳಿದ ಜಾಗ ಒತ್ತುವರಿ ಮಾಡಿಕೊಂಡವರು ಸ್ವಯಂಪ್ರೇರಿತರಾಗಿ ಭೂಮಿಯನ್ನು ಸರ್ಕಾರಕ್ಕೆ ಒಪ್ಪಿಸಬೇಕು. ಇಲ್ಲದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಹಾಗೆಯೇ ೨೦೧೯ರಲ್ಲಿ ಭೂಕುಸಿತ ಸಮಯದಲ್ಲಿ ನಷ್ಟ ಅನುಭವಿಸಿರುವ ಕುಟುಂಬಗಳಿಗೆ ಪರಿಹಾರ ನೀಡುವ ಸಂಬAಧ ಸ್ಥಳ ಪರಿಶೀಲನೆ ಮಾಡುವುದಾಗಿ ತಿಳಿಸಿದರು. ಹಾಗೂ ಬಿಟ್ಟಂಗಾಲ ಮತ್ತು ಆರ್ಜಿ ಗ್ರಾಮಪಂಚಾಯಿತಿಗಳ ನಡುವೆ ಇರುವ ಗೊಂದಲವನ್ನು ಶೀಘ್ರವಾಗಿ ಪರಿಹರಿಸುವಂತೆ ಗ್ರಾಮಸ್ಥರು ತಹಶೀಲ್ದಾರ್ ಅವರಲ್ಲಿ ಮನವಿ ಮಾಡಿದರು.

ಸಭೆಯಲ್ಲಿ ಗ್ರೇಡ್-೨ ತಹಶೀಲ್ದಾರ್ ಪ್ರದೀಪ್ ಕುಮಾರ್, ಶಿರಸ್ತೆದಾರ್ ಪೊನ್ನು, ಕಂದಾಯ ಅಧಿಕಾರಿ ಹರೀಶ್, ಸಹಾಯಕ ಇಂಜೀನಿಯರ್ ಸುರೇಶ್, ಗ್ರಾಮಪಂಚಾಯಿತಿ ಅಧ್ಯಕ್ಷೆ ಪಾರ್ವತಿ, ಉಪಾಧ್ಯಕ್ಷ ಉಪೇಂದ್ರ, ಗ್ರಾಮಸ್ಥರು ಹಾಜರಿದ್ದರು.