ಮಡಿಕೇರಿ, ಮಾ. ೨೧; ಭಾಷೆ., ಸಾಹಿತ್ಯ., ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಸ್ಥಾಪಿತವಾಗಿರುವ ಅಕಾಡೆಮಿಗಳಿಗೆ ಅನುದಾನದ ಕೊರತೆಯಿಂದಾಗಿ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅಡ್ಡಿಯುಂಟಾಗಿದೆ. ಸರಕಾರದಿಂದ ಬಿಡುಗಡೆಯಾದ ಅನುದಾನದಲ್ಲಿ ನಿರ್ವಹಣಾ ವೆಚ್ಚಕ್ಕಾಗಿ ಶೇ.೬೦ರಷ್ಟು ಹಣ ಬೇಕಾಗಲಿದ್ದು, ಕಾರ್ಯಕ್ರಮ ರೂಪಿಸಲು ಹಣ ಸಾಕಾಗುತ್ತಿಲ್ಲ. ಹಾಗಾಗಿ ಅಕಾಡೆಮಿಗಳ ಸಾಕಷ್ಟು ಕಾರ್ಯಕ್ರಮಗಳನ್ನು ಮೊಟಕು ಗೊಳಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ..!
ಅಳಿವಿನಂಚಿನಲ್ಲಿರುವ ವಿಭಿನ್ನ ಭಾಷೆ ಹಾಗೂ ಸಂಸ್ಕೃತಿಯನ್ನು ಒಳ ಗೊಂಡಿರುವ ಭಾಷೆ ಹಾಗೂ ಸಂಸ್ಕೃತಿಯನ್ನು ಪೋಷಿಸುವ ನಿಟ್ಟಿನಲ್ಲಿ ಸರಕಾರ ಭಾಷಾ ಹಾಗೂ ಸಾಹಿತ್ಯ ಅಕಾಡೆಮಿಗಳನ್ನು ಸ್ಥಾಪನೆ ಮಾಡಿ, ಅನುದಾನ ಮೀಸಲಿಟ್ಟು ಕಾರ್ಯ ಕ್ರಮಗಳನ್ನು ರೂಪಿಸ ಲಾಗುತ್ತಿದೆ. ಈ ಪೈಕಿ ಕೊಡಗು ಜಿಲ್ಲೆಯಲ್ಲಿಯೂ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಗಳನ್ನು ಸ್ಥಾಪನೆ ಮಾಡಲಾಗಿದೆ. ಇದುವರೆಗೆ ಅಕಾಡೆಮಿಗಳಿಗೆ ದೊಡ್ಡ ಮೊತ್ತದ ಅನುದಾನ ಬರುತ್ತಿದ್ದುದರಿಂದ ಹೆಚ್ಚಿನ ಕಾರ್ಯಕ್ರಮ ಹಮ್ಮಿಕೊಳ್ಳಲು ಸಹಕಾರಿಯಾಗುತ್ತಿತ್ತು. ಆದರೆ ಇದೀಗ ಕಳೆದ ಮೂರು ವರ್ಷಗಳಿಂದಲೂ ವಾರ್ಷಿಕವಾಗಿ ಕೇವಲ ರೂ.೩೬ ಲಕ್ಷ ಮಾತ್ರ ಅನುದಾನ ಬಿಡುಗಡೆ ಯಾಗುತ್ತಿರುವದರಿಂದ ಕೆಲವೊಂದು ಕಾರ್ಯಕ್ರಮಗಳನ್ನು ಮೊಟಕು ಗೊಳಿಸುವ ಪರಿಸ್ಥಿತಿ ಬಂದೊದಗಿದೆ.
ಶೇ.೬೦ ನಿರ್ವಹಣಾ ವೆಚ್ಚಕ್ಕೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸರಕಾರದಿಂದ ರೂ.೭ಕೋಟಿ ಮಾತ್ರ ಅನುದಾನ ಬಿಡುಗಡೆಯಾಗಿದೆ. ಆ ಅನುದಾನದಲ್ಲಿ ಎಲ್ಲ ಅಕಾಡೆಮಿಗಳಿಗೆ ತಲಾ ರೂ.೩೬ ಲಕ್ಷದಂತೆ ಹಂಚಿಕೆ ಮಾಡಲಾಗಿದೆ. ಈ ಹಣದಲ್ಲಿ ಶೇ.೬೦ರಷ್ಟು ನಿರ್ವಹಣಾ ವೆಚ್ಚಕ್ಕೆ ಬೇಕಾಗುತ್ತದೆ. ದಶಮಾನೋತ್ಸವದ ಸಂಭ್ರಮದಲ್ಲಿರುವ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯಲ್ಲಿ ಕಚೇರಿ ಬಾಡಿಗೆ, ಸಿಬ್ಬಂದಿಗಳ ವೇತನ, ಸಭಾ ಭತ್ಯೆ, ಇಂಧನ, ಸಾರಿಗೆ ವೆಚ್ಚ ಸೇರಿದಂತೆ ವರ್ಷಕ್ಕೆ ರೂ.೨೨ಲಕ್ಷ ಬೇಕಾಗುತ್ತದೆ. ಇನ್ನುಳಿದ ರೂ.೧೪ಲಕ್ಷದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ.
ಕಾರ್ಯಕ್ರಮಗಳಿಗೆ ಹಣ ಸಾಲದು
ನಿರ್ವಹಣಾ ವೆಚ್ಚ ಕಳೆದು ಇನ್ನುಳಿದ ಹಣದಲ್ಲಿ ಬೇರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಬೇಕಾಗುತ್ತದೆ. ಈ ಪೈಕಿ ಪುಸ್ತಕ ಬಿಡುಗಡೆ, ಗೌರವ ಪ್ರಶಸ್ತಿ ಪ್ರದಾನ, ತ್ರೆöÊಮಾಸಿಕ
(ಮೊದಲ ಪುಟದಿಂದ) ಸಂಚಿಕೆ ಬಿಡುಗಡೆ ಮಾಡಲೇಬೇಕಿದೆ. ಈ ನಡುವೆ ಅಕಾಡೆಮಿಯಿಂದ ಶಬ್ಧಕೋಶ, ವಿಶ್ವಕೋಶ, ಪಾರಂಪರಿಕಾ ವಿಶ್ವಕೋಶ ರಚನೆ ಕೆಲಸಗಳಾಗುತ್ತಿದ್ದು, ಇವುಗಳಿಗೂ ಹಣ ಹೊಂದಿಸಿಕೊಳ್ಳಬೇಕಿದೆ. ಆದರೆ, ಲಭ್ಯವಿರುವ ಹಣ ಸಾಕಾಗುವದಿಲ್ಲ. ಬೇರೆ ಯಾವದೇ ಕಾರ್ಯಕ್ರಮಗಳನ್ನು ನಡೆಸಲಾಗುವದಿಲ್ಲ.
ರೂ. ೧ ಕೋಟಿ ಬಂದಿಲ್ಲ
ಕೊಡವ ಸಾಹಿತ್ಯ ಅಕಾಡೆಮಿಯಲ್ಲೂ ಕೂಡ ಇದೇ ಪರಿಸ್ಥಿತಿ ಕಂಡುಬರುತ್ತಿದೆ. ಬಹಳ ಹಿಂದೆಯೇ ಸ್ಥಾಪಿತವಾಗಿರುವ ಈ ಅಕಾಡೆಮಿ ಈ ಹಿಂದಿನಿAದಲೂ ಸಾಕಷ್ಟು ಅನುದಾನದೊಂದಿಗೆ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿದೆ. ಸಾಕಷ್ಟು ಪುಸ್ತಕಗಳನ್ನು ಹೊರತಂದಿದೆ. ಹಲವಾರು ಪ್ರತಿಭೆಗಳಿಗೆ ತರಬೇತಿಯನ್ನೂ ನೀಡಿದೆ. ಆದರೀಗ ಅನುದಾನದ ಕೊರತೆಯಿಂದಾಗಿ ಸೀಮಿತ ಕಾರ್ಯಕ್ರಮಗಳನ್ನು ಮಾತ್ರ ಹಮ್ಮಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಯೂ ರೂ.೩೬ ಲಕ್ಷ ಅನುದಾನದಲ್ಲಿ ನಿರ್ವಹಣಾ ವೆಚ್ಚಕ್ಕಾಗಿ ರೂ.೧೮ಲಕ್ಷ ಬೇಕಾಗುತ್ತದೆ. ಇನ್ನುಳಿದ ರೂ.೧೮ ಲಕ್ಷದಲ್ಲಿ ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ. ಇಲ್ಲಿಯೂ ಪುಸ್ತಕ ಬಿಡುಗಡೆ, ಗೌರವ ಪ್ರಶಸ್ತಿ ಪ್ರದಾನ, ದಾಖಲೀಕರಣ ಕಾರ್ಯಗಳನ್ನು ಮಾಡಲೇಬೇಕಿದೆ. ಹಾಗಾಗಿ ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕಷ್ಟವಾಗಲಿದೆ.
ಈಗಾಗಲೇ ಅಕಾಡೆಮಿಯಿಂದ ಆಗುವಷ್ಟು ಹಲವಷ್ಟು ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಲಾಗಿದೆ. ಈ ಪೈಕಿ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ಸೇರಿದ್ದು, ಇದಕ್ಕೆ ಒಂದು ಹಾಡಿಗೆ ರೂ. ೧೦ ಸಾವಿರದಷ್ಟು ವೆಚ್ಚವಾಗಲಿದೆ. ಆದರೆ, ಅನುದಾನದ ಕೊರತೆ ಕಾಡುತ್ತಿದೆ. ಈ ಹಿಂದೆ ಅಕಾಡೆಮಿಗೆ ರೂ. ೭೫ ಸಾವಿರದಿಂದ ರೂ. ೧ ಕೋಟಿಯಷ್ಟು ಅನುದಾನ ಬಿಡುಗಡೆಯಾಗಿತ್ತು. ಇದೀಗ ಅರ್ಧಕ್ಕಿಂತ ಕಡಿಮೆ ಅನುದಾನ ಬರುತ್ತಿದೆ.
ಕಲೆ, ಸಂಸ್ಕೃತಿ, ಭಾಷೆ, ಸಾಹಿತ್ಯವನ್ನು ಪೋಷಿಸುವ ಸಲುವಾಗಿ ಸರಕಾರವೇ ಸ್ಥಾಪನೆ ಮಾಡಿರುವ ಅಕಾಡೆಮಿಗಳಿಗೆ ಕೋವಿಡ್ ನೆಪವೊಡ್ಡಿ ಸರಕಾರವೇ ಅನುದಾನ ಕಡಿತಗೊಳಿಸಿರುವದು ಸರಿಯಲ್ಲ ಎಂಬ ಅಭಿಪ್ರಾಯ ಸಾಹಿತ್ಯಾಸಕ್ತರಲ್ಲಿ ಕೇಳಿಬರುತ್ತಿದೆ. ಚುನಾವಣೆ, ವರ್ಷದ ಸಾಧನೆ ಸೇರಿದಂತೆ ಅನಗತ್ಯವಾಗಿ ಹಣ ವೆಚ್ಚ ಮಾಡುವ ಬದಲಿಗೆ ಇಂತಹ ಒಂದು ಉತ್ತಮ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿರುವ ಅಕಾಡೆಮಿಗಳಿಗೆ ಸಮರ್ಪಕವಾದ ಅನುದಾನ ಒದಗಿಸಿಕೊಟ್ಟಲ್ಲಿ ಭಾಷೆ, ಸಂಸ್ಕೃತಿ, ಸಾಹಿತ್ಯ ಬೆಳವಣಿಗೆ ಕಾಣಬಹುದು. ?ಕುಡೆಕಲ್ ಸಂತೋಷ್