ಮಡಿಕೇರಿ, ಮಾ. ೨೧: ಕೋವಿಡ್ ನಿರೋಧಕ ಲಸಿಕೆಯ ವಿತರಣೆಯಲ್ಲಿ ಕೊಡಗು ಜಿಲ್ಲೆ ರಾಜ್ಯದಲ್ಲಿಯೇ ೨ ನೇ ಸ್ಥಾನ ಪಡೆದು ಮೊದಲ ಹಾಗೂ ೨ನೇ ಡೋಸ್ ಲಸಿಕೆ ವಿತರಣೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ ಯಾದರೂ ವಿವಿಧ ಕಾರಣಗಳಿಂದಾಗಿ ಲಸಿಕಾ ಅಭಿಯಾನ ವ್ಯಾಪಕವಾಗಿ ನಡೆಯುತ್ತಿದ್ದ ಸಂದರ್ಭ ಲಸಿಕೆ ಪಡೆಯದೆ ಇದ್ದವರು ಇದೀಗ ಸಂಕಷ್ಟಕ್ಕೆ ಸಿಲುಕಿ ಕೊಂಡಿದ್ದಾರೆ. ಲಸಿಕೆ ಇದ್ದರೂ ಚುಚ್ಚಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ.
ಮೊದಲೆಲ್ಲ ಲಸಿಕೆ ಪಡೆಯಲು ಜನಸಾಗರವೇ ಲಸಿಕಾ ಕೇಂದ್ರಗಳಿಗೆ ಮುಗಿಬೀಳುತ್ತಿತ್ತು. ಈ ಫಲಾನುಭವಿಗಳಿಗೆ ೧ ‘ವಯಲ್’ನಲ್ಲಿದ್ದ ಗರಿಷ್ಠ ೧೦ ಡೋಸ್‌ಗಳನ್ನು ನೀಡಲಾಗುತ್ತಿತ್ತು. ವಯಲ್ ಒಂದನ್ನು ತೆರೆದಿಟ್ಟರೆ ೧೦ ಡೋಸ್‌ಗಳನ್ನು ಕೊಡಲೇಬೇಕು. ಈ ಹಿಂದೆ ಲಸಿಕೆ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾಗ ಇದು ಸಾಧ್ಯವಾಗುತ್ತಿತ್ತು. ಈ ವ್ಯಾಪಕ ಲಸಿಕಾ ಅಭಿಯಾನದಿಂದಾಗಿ ಜಿಲ್ಲೆಯ ಬಹುತೇಕ ಮಂದಿ ಲಸಿಕೆ ಪಡೆದುಕೊಂಡರು.
ಆದರೆ, ಈ ಮೊದಲು ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸುತ್ತಿದ್ದವರು ಸೇರಿದಂತೆ ಕೋವಿಡ್ ಸೋಂಕಿ ನಿಂದ ಬಳಲುತ್ತಿದ್ದು, ಇದೀಗ ಚೇತರಿಸಿಕೊಂಡು ೩ ತಿಂಗಳು ಕಳೆದಿರುವವರು ಮಾತ್ರ ಲಸಿಕೆ ಪಡೆಯಲು ಬಾಕಿ ಇದ್ದಾರೆ. ಇಂತಹವರ ಸಂಖ್ಯೆ ಕಡಿಮೆಯಿದ್ದು, ಜಿಲ್ಲೆಯಾದ್ಯಂತ ವಿವಿಧೆಡೆ ನೆಲೆಸಿದ್ದಾರೆ. ಇಂತಹವರು ಲಸಿಕಾ ಕೇಂದ್ರಗಳಿಗೆ ತೆರಳಿದರೆ ಒಟ್ಟು ೧೦ ಮಂದಿ ಫಲಾನುಭವಿಗಳು ಬರುವವರೆಗೆ ಕಾಯಬೇಕು. ಇಲ್ಲದಿದ್ದಲ್ಲಿ ಆ ‘ವಯಲ್’ ಅನ್ನು ತೆರೆಯಲು ಆರೋಗ್ಯ ಇಲಾಖೆಯ ಸಿಬ್ಬಂದಿ ನಿರಾಕರಿಸುತ್ತಾರೆ.
ಆದರೂ, ಕೇವಲ ೫, ೬ ಮಂದಿ ಬಂದು ‘ವಯಲ್’ ಅನ್ನು ತೆರೆದರೆ, ಉಳಿದ ೫, ೪ ಡೋಸ್‌ಗಳು ಬಳಕೆಯಾಗದೆ ಉಳಿಯಲಿವೆ.
(ಮೊದಲ ಪುಟದಿಂದ) ಇದು ವ್ಯರ್ಥವಾಗಿ (ವೇಸ್ಟೇಜ್) ಪರಿಗಣಿಸಲ್ಪಡುತ್ತದೆ.
‘ವೇಸ್ಟೇಜ್’ ಸಂಖ್ಯೆಯ ಕುರಿತು ಆರೋಗ್ಯ ಇಲಾಖೆಯವರು ಸರಕಾರಕ್ಕೆ ವರದಿ ನೀಡಬೇಕಾಗಿದ್ದು, ವೇಸ್ಟೇಜ್ ಹೆಚ್ಚಿದ್ದರೆ, ವೇಸ್ಟೇಜ್ ಸಂಖ್ಯೆಯನ್ನು ಕಡಿಮೆ ಮಾಡುವಂತೆ ಸರಕಾರದಿಂದÀ ಒತ್ತಡ ಹೇರಲಾಗುತ್ತದೆ. ಈ ನೆಪದಲ್ಲಿ ಲಸಿಕಾ ಕೇಂದ್ರಕ್ಕೆ ಆಗಮಿಸಿರುವ ೧೦ ಕ್ಕಿಂತ ಕಡಿಮೆ ಸಂಖ್ಯೆಯ ಫಲಾನುಭವಿಗಳಿಗೆ ಲಸಿಕೆ ನೀಡಲು ನಿರಾಕರಿಸಲೂ ಕಷ್ಟಸಾಧ್ಯವಾಗಿದ್ದು, ಆರೋಗ್ಯ ಇಲಾಖಾ ಸಿಬ್ಬಂದಿ ಕಷ್ಟದಲ್ಲಿ ಸಿಲುಕಿದ್ದು, ಲಸಿಕಾ ಫಲಾನುಭವಿಗಳೂ ಪರದಾಡುವಂತಾಗಿದೆ. ಇದೇ ಕಾರಣಕ್ಕೆ ಕೆಲವೊಂದು ಗ್ರಾಮೀಣ ಭಾಗಗಳಲ್ಲಿ ೨ ದಿನಕ್ಕೊಮ್ಮೆ ಬೂಸ್ಟರ್ ಲಸಿಕೆ ನೀಡಲಾಗುತ್ತಿದೆ.
ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ನಿರಾಕರಣೆ
ತಿಂಗಳಾAತ್ಯದಲ್ಲಿ ಎಸ್.ಎಸ್.ಎಲ್.ಸಿ, ಪಿಯು ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆ ಎದುರಿಸಬೇಕಾಗಿದ್ದು, ಪರೀಕ್ಷಾ ಕೊಠಡಿಗಳ ಪ್ರವೇಶಕ್ಕೆ ಅಗತ್ಯವಿರುವ ‘ಹಾಲ್ ಟಿಕೆಟ್’ ಅನ್ನು ವಿದ್ಯಾಸಂಸ್ಥೆಗಳು, ಲಸಿಕೆ ಪಡೆದಿರುವ ಪ್ರಮಾಣಪತ್ರವಿದ್ದರೆ ಮಾತ್ರ ವಿತರಿಸುತ್ತಿವೆ. ಶಾಲಾ, ಕಾಲೇಜುಗಳಲ್ಲಿ ಈ ಹಿಂದೆ ಲಸಿಕೆ ಅಭಿಯಾನ ನಡೆದಿವೆಯಾದರೂ, ಈ ಸಂದರ್ಭ ಕೋವಿಡ್‌ನಿಂದ ಬಳಲುತ್ತಿದ್ದ ವಿದ್ಯಾರ್ಥಿಗಳು ಲಸಿಕೆ ಪಡೆದಿರಲಿಲ್ಲ. ಇದೀಗ ಸೋಂಕು ಮುಕ್ತವಾಗಿ ೩ ತಿಂಗಳು ಕಳೆದ ಬಳಿಕ ಲಸಿಕೆ ಪಡೆಯುವುದಾದರೆ, ವೇಸ್ಟೇಜ್ ನೆಪದಲ್ಲಿ ಲಸಿಕೆ ದೊರಕದೆ ಹೋಗುತ್ತದೆ. ಪ್ರಸ್ತುತ ನಡೆಯುತ್ತಿರುವ ಪೂರ್ವಸಿದ್ಧತಾ ಪರೀಕ್ಷೆಗಳಿಗೂ ಗೈರಾಗಿ ಲಸಿಕಾ ಕೇಂದ್ರಕ್ಕೆ ತೆರಳಿದರೂ ಕನಿಷ್ಟ ೧೦ ಫಲಾನುಭವಿಗಳಿಲ್ಲದೆ ವಾಪಸ್ಸಾಗುತ್ತಿರುವ ಹಲವಷ್ಟು ಪ್ರಸಂಗಗಳು ನಡೆದಿವೆ.
ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಜನಪ್ರತಿನಿಧಿಗಳ ಸಹಕಾರದೊಂದಿಗೆ, ಕಡಿಮೆ ಡೋಸ್‌ಗಳ ಸಾಮರ್ಥ್ಯವಿರುವ ವಯಲ್‌ಗಳ ಮೂಲಕ ಲಸಿಕೆ ಸರಬರಾಜು ಮಾಡುವಂತೆ ಅಥವಾ ವಾರಕ್ಕೆ ೨ ದಿನಗಳಿಗೆ ಮಾತ್ರ ಲಸಿಕಾ ಅಭಿಯಾನವನ್ನು ಸೀಮಿತಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. -ಪ್ರಜ್ವಲ್