ಸೋಮವಾರಪೇಟೆ, ಮಾ. ೨೨: ಕಾಫಿ ಬೆಳೆಗಾರರು ಬಳಸುತ್ತಿರುವ ೧೦ ಹೆಚ್.ಪಿ. ಪಂಪ್ಸೆಟ್ಗಳಿಗೂ ಉಚಿತ ವಿದ್ಯುತ್ ನೀಡಲು ಸರ್ಕಾರ ಸಿದ್ಧವಿದ್ದು, ಕೆಲವೊಂದು ಮಾನದಂಡಗಳನ್ನು ಅಳವಡಿಸಿ ಕಾರ್ಯರೂಪಕ್ಕೆ ತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಘೋಷಣೆ ಮಾಡಿರುವ ಹಿನ್ನೆಲೆ ಸೋಮವಾರಪೇಟೆಯಲ್ಲಿ ರೈತರು ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು.
ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಜಮಾವಣೆಗೊಂಡ ರೈತರು, ಮುಖ್ಯಮಂತ್ರಿಗಳ ಘೋಷಣೆಗೆ ಸಂತಸ ವ್ಯಕ್ತಪಡಿಸಿದರು. ಕಳೆದ ಬೆಳಗಾವಿ ಅಧಿವೇಶನದ ಸಂದರ್ಭ ೧೭ ದಿನಗಳ ಕಾಲ ಧರಣಿ ನಡೆಸಿದ್ದ ರೈತರು, ಈ ಬಾರಿಯ ಬಜೆಟ್ನಲ್ಲಾದರೂ ಬೇಡಿಕೆ ಈಡೇರುವ ಆಸೆ ಹೊಂದಿದ್ದರು.
ಆದರೆ ಬಜೆಟ್ನಲ್ಲಿ ಉಚಿತ ವಿದ್ಯುತ್ ಘೋಷಣೆಯಾಗದ ಹಿನ್ನೆಲೆ ನಿರಾಸೆ ಹೊಂದಿದ್ದ ಕೃಷಿಕರಿಗೆ, ಇಂದು ಮುಖ್ಯಮಂತ್ರಿಗಳು ನೀಡಿದ ಹೇಳಿಕೆ ಸಮಾಧಾನ ತಂದಿದ್ದು, ರೈತ ಸಂಘದಿAದ ನಡೆದ ೧೦ ಹೆಚ್ಪಿವರೆಗಿನ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಹೋರಾಟಕ್ಕೆ ಜಯ ಲಭಿಸಿದೆ ಎಂದು ಅಭಿಪ್ರಾಯಿಸಿದರು.
ಅಧಿವೇಶನದಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆದ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಸಿ.ಟಿ. ರವಿ, ಕುಮಾರಸ್ವಾಮಿ, ರಾಮಸ್ವಾಮಿ ಅವರುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ರೈತ ಸಂಘದ ಪದಾಧಿಕಾರಿಗಳಾದ ರಾಜಪ್ಪ ಮಾಸ್ಟರ್, ನಾಗರಾಜು, ಕುಶಾಂತ್, ಲಿಂಗೇರಿ ರಾಜೇಶ್, ಹೂವಯ್ಯ ಮಾಸ್ಟರ್, ಮೊಗಪ್ಪ, ದಿವಾಕರ್, ರಮೇಶ್, ಸ್ವಾಗತ್, ಆದರ್ಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.