ಗೋಣಿಕೊಪ್ಪಲು, ಮಾ. ೨೧: ಜಿಲ್ಲೆಯ ರೈತರಿಗೆ ೧೦ ಹೆಚ್.ಪಿ.ವರೆಗೆ ಉಚಿತವಾಗಿ ವಿದ್ಯುತ್ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಮುಂದಾಳತ್ವದಲ್ಲಿ ರೈತ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿಯನ್ನು ಮನವಿ ಮಾಡಿದ್ದಾರೆ.
ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರನ್ನು ಭೇಟಿ ಮಾಡಿದ ರೈತ ಸಂಘದ ಪದಾಧಿಕಾರಿಗಳು ಈ ಬಗ್ಗೆ ಜಿಲ್ಲೆಯ ರೈತರು ಅನುಭವಿಸುತ್ತಿರುವ ತೊಂದರೆ ಬಗ್ಗೆ ಗಮನ ಸೆಳೆದರು.
ರಾಜ್ಯದ ಹಲವಾರು ಜಿಲ್ಲೆಯಲ್ಲಿ ರೈತರಿಗೆ ೧೦ ಹೆಚ್.ಪಿ. ವಿದ್ಯುತ್ ಉಚಿತವಾಗಿ ಲಭ್ಯವಾಗುತ್ತಿದೆ. ಕೊಡಗು ಜಿಲ್ಲೆಯ ರೈತರು ಇದರಿಂದ ಅವಕಾಶ ವಂಚಿತರಾಗಿದ್ದಾರೆ. ರೈತ ಸಂಘವು ಹಲವು ಬಾರಿ ಈ ಬಗ್ಗೆ ಹೋರಾಟ ನಡೆಸಿ ಸರ್ಕಾರದ ಗಮನ ಸೆಳೆದಿದೆ. ಆದರೂ ಪ್ರಯೋಜನವಾಗಿಲ್ಲ. ಈ ಬಾರಿಯ ಅಧಿವೇಶನದಲ್ಲಿ ಈ ಬಗ್ಗೆ ರೈತರ ಹಲವು ವರ್ಷಗಳ ಬೇಡಿಕೆಯ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ಮನು ಸೋಮಯ್ಯ ಮುಖ್ಯ ಮಂತ್ರಿಗಳಿಗೆ ಇಲ್ಲಿನ ವಿದ್ಯಾಮಾನಗಳ ಬಗ್ಗೆ ಮಾಹಿತಿ ಒದಗಿಸಿದರು.
ಕೊಡಗಿನ ರೈತರು ಹೆಚ್ಚಾಗಿ ಕಾಫಿ ಹಾಗೂ ಕರಿಮೆಣಸು ಬೆಳೆಯುತ್ತಾರೆ. ಜನವರಿ, ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಮಾತ್ರ ರೈತರು ಬೆಳೆಗಳಿಗೆ ನೀರನ್ನು ಬಳಕೆ ಮಾಡುತ್ತಾರೆ. ಉಳಿದ ಸಮಯದಲ್ಲಿ ನಮಗೆ ವಿದ್ಯುತ್ ಅವಶ್ಯಕತೆ ಇರುವುದಿಲ್ಲ. ಹೀಗಾಗಿ ಉಚಿತ ವಿದ್ಯುತ್ ನೀಡುವುದು ಸರಿಯಾದ ಕ್ರಮವಾಗಿದೆ ಎಂದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಭೇಟಿಯ ವೇಳೆ ಜಿಲ್ಲಾ ಪ್ರ.ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ,ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಪದಾಧಿಕಾರಿಗಳಾದ ಆಲೆಮಾಡ ಮಂಜುನಾಥ್, ರಾಯ್ ಮಾದಪ್ಪ, ತೀತರಮಾಡ ರಾಜ, ಮಂಡೆಪAಡ ಪ್ರವೀಣ್ ಸೇರಿದಂತೆ ಇನ್ನಿತರ ಪ್ರಮುಖರು ಹಾಜರಿದ್ದರು.
- ಹೆಚ್.ಕೆ. ಜಗದೀಶ್
 
						