ಮಡಿಕೇರಿ, ಮಾ. ೨೧: ರಾಜ್ಯದ ಇತರ ಜಿಲ್ಲೆಗಳಿಗೆ ಕಲ್ಪಿಸಿರುವಂತೆ ಜಿಲ್ಲೆಯ ಕಾಫಿ ಬೆಳೆಗಾರರಿಗೆ ಹತ್ತು ಹೆಚ್‌ಪಿವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ಒತ್ತಾಯಿಸಿ ಜಿಲ್ಲೆಯ ಕಾಫಿ ಬೆಳೆಗಾರರು ಮಡಿಕೇರಿಯ ಸೆಸ್ಕ್ ಕಾರ್ಯಪಾಲಕ ಅಭಿಯಂತರರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ರೈತರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಕೊಡಗು ಬಂದ್ ಮಾಡುವದಾಗಿ ಎಚ್ಚರಿಸಿದರು.
ರಾಜ್ಯದ ಇತರ ಜಿಲ್ಲೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಮಾವು, ಕಬ್ಬು ಮುಂತಾದ ಬೆಳೆಗಳಿಗೆ ರೈತರು ಉಪಯೋಗಿಸುತ್ತಿರುವ ೧೦ ಹೆಚ್‌ಪಿವರೆಗಿನ ಪಂಪ್‌ಸೆಟ್‌ಗಳಿಗೆ ಸರಕಾರದಿಂದ ಉಚಿತವಾಗಿ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಆದರೆ, ಜಿಲ್ಲೆಯಲ್ಲಿ ಕಾಫಿ ಬೆಳೆಗಾರರು ಉಪಯೋಗಿಸುತ್ತಿರುವ ಪಂಪ್‌ಸೆಟ್ ಗಳಿಗೆ ವಿದ್ಯುತ್ ಶುಲ್ಕ ಪಾವತಿಸುವಂತೆ ಒತ್ತಡ ಹೇರಲಾಗುತ್ತಿದ್ದು, ಸಂಪರ್ಕ ಕಡಿತಗೊಳಿಸಲಾಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಉಚಿತ ವಿದ್ಯುತ್ ಕಲ್ಪಿಸುವ ಬಗ್ಗೆ ಭರವಸೆ ನೀಡಿದ್ದಾರೆ. ಆದರೂ ಸೆಸ್ಕ್ ಕಾರ್ಯಪಾಲಕ ಅಭಿಯಂತರರ ಸೂಚನೆ ಮೇರೆಗೆ ಅಧಿಕಾರಿಗಳು ಸಂಪರ್ಕ ಕಡಿತಗೊಳಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕೊಡಗು ಬಂದ್ ಎಚ್ಚರಿಕೆ
ಜಿಲ್ಲೆಯಲ್ಲಿನ ಬೆಳೆಗಾರರು ವರ್ಷದಲ್ಲಿ ಎರಡು ತಿಂಗಳು ಮಾತ್ರ ಕಾಫಿ ತೋಟಗಳಿಗೆ ನೀರು ಹಾಯಿಸಲು ವಿದ್ಯುತ್ ಉಪಯೋಗಿ ಸುತ್ತಾರೆ. ಅದರ ಬಿಲ್ ಕೇವಲ ರೂ.೧೨ ಕೋಟಿಯಷ್ಟು ಮಾತ್ರ ಬಾಕಿ ಇದೆ, ಇದು ಸರಕಾರಕ್ಕೆ ದೊಡ್ಡ ಹೊರೆಯೇನಲ್ಲ. ಇದನ್ನು ಮನ್ನಾ ಮಾಡಬಹುದು. ಆದರೆ ಅದನ್ನು ಮಾಡದೆ ಪಂಪ್‌ಸೆಟ್‌ಗಳ ಸಂಪರ್ಕ ಕಡಿತಗೊಳಿಸಲಾಗುತ್ತಿದೆ. ಇದರಿಂದ ಕುಡಿಯುವ ನೀರಿನ ಸಂಪರ್ಕವೂ ಕಡಿತವಾಗುತ್ತಿದ್ದು, ರೈತರಿಗೆ ತೊಂದರೆಯಾಗುತ್ತಿದೆ. ಇನ್ನು ಮುಂದಕ್ಕೆ ಕಡಿತಗೊಳಿಸಿದರೆ ಹೋರಾಟವನ್ನು ತೀವ್ರಗೊಳಿಸು ವದಲ್ಲದೆ, ರಸ್ತೆ ತಡೆ, ಕಚೇರಿಗಳಿಗೆ ಮುತ್ತಿಗೆ ಹಾಕುವದರೊಂದಿಗೆ ಕೊಡಗು ಬಂದ್ ಮಾಡಲಾಗುವದೆಂದು ಎಚ್ಚರಿಕೆ ನೀಡಿದರು.
ಶಾಸಕರು ಧರಣಿ ಕುಳಿತರೆ ಆಗುತ್ತದೆ
ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಶಾಸಕರುಗಳು ರೈತರ ಬೇಡಿಕೆಗಳನ್ನು ಮುಂದಿಟ್ಟು ಸದನದಲ್ಲಿ ಧರಣಿ ಕುಳಿತರೆ ಖಂಡಿತಾ ಬೇಡಿಕೆಗಳು ಈಡೇರುತ್ತವೆ, ಆದರೆ ಶಾಸಕರುಗಳು ಅದನ್ನು ಮಾಡುತ್ತಿಲ್ಲ, ಜನರ ಋಣ ಜನಪ್ರತಿನಿಧಿಗಳ ಮೇಲೆ ಇದೆ ಎಂಬದನ್ನು ಮನಗಾಣಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಮೀಟರ್ ಬಿಚ್ಚುತ್ತೇವೆ
ರೈತರ ಬೇಡಿಕೆಗಳನ್ನು ಈಡೇರಿಸು ವದರೊಂದಿಗೆ ಉಚಿತ ವಿದ್ಯುತ್ ಕಲ್ಪಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ವಿದ್ಯುತ್ ಬಿಲ್ ನೀಡಲು ಬರುವ ಸಿಬ್ಬಂದಿಗಳನ್ನು ತಡೆಯುವದಲ್ಲದೆ, ಮೀಟರ್‌ಗಳನ್ನು ಬಿಚ್ಚಿ ಸೆಸ್ಕ್ ಕಚೇರಿಗೆ ತಂದು ಸುರಿಯಲಾಗುವದೆಂದು ಎಚ್ಚರಿಕೆ ನೀಡಿದರು.
ಅಧಿಕಾರಿಗಳ ಅಸಮ್ಮತಿ
ಸ್ಥಳಕ್ಕೆ ಕಾರ್ಯಪಾಲಕ ಅಭಿಯಂತರರು ಆಗಮಿಸುವಂತೆ ಪಟ್ಟು ಹಿಡಿದಿದ್ದರಿಂದ ಮಧ್ಯಾಹ್ನದ ವೇಳೆಗೆ ಪ್ರಬಾರ ಕಾರ್ಯಪಾಲಕ ಅಭಿಯಂತರ ಅಶೋಕ್ ಆಗಮಿಸಿ ದರು. ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಪ್ರತಿಭಟನಾಕಾರರು ಅವರಲ್ಲಿ ಮನವಿ ಮಾಡಿಕೊಂಡಾಗ; ಉಚಿತ ವಿದ್ಯುತ್ ನೀಡಲಾಗುವದಿಲ್ಲ, ಅಲ್ಲದೆ, ವಿದ್ಯುತ್ ಬಿಲ್ ಬಾಕಿ ಇರುವ ದರಿಂದ ಪಾವತಿ ಮಾಡಲೇಬೇಕೆಂದು ಹೇಳಿದರು. ಮತ್ತೆ ಪಟ್ಟು ಹಿಡಿದ ಪ್ರತಿಭಟನಾಕಾರರು ಸಂಜೆವರೆಗೂ ಪ್ರತಿಭಟನೆ ಮುಂದುವರಿಸಿದರು.
 
						