ಸುಂಟಿಕೊಪ್ಪ, ಮಾ. ೨೧: ಪ್ರತಿಯೊಬ್ಬ ವಿಶೇಷಚೇತನರು ಗುರುತಿನ ಚೀಟಿಗಳನ್ನು ಪಡೆದುಕೊಳ್ಳಬೇಕು ಎಂದು ವಿಶೇಷಚೇತನ ಜಿಲ್ಲಾ ಕಲ್ಯಾಣಾಧಿಕಾರಿ ವಿಮಲ ಸಲಹೆ ನೀಡಿದರು.

ದ ಕೂರ್ಗ್ ಫೌಂಡೇಷನ್ ಮತ್ತು ಸುಂಟಿಕೊಪ್ಪ ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದಲ್ಲಿ ವಾರ್ಷಿಕ ಉಚಿತ ಸಲಕರಣೆಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಶೇಷಚೇತನರಿಗೆ ಅನುಕಂಪ ತೋರಿಸಿದರೆ ಸಾಲದು ಅವರಿಗೆ ಸಾಮಾನ್ಯ ಮಕ್ಕಳಂತೆ ಬೆಳೆಯಲು ಅವಕಾಶ ನೀಡಿ ಸಮಾಜದ ಮುಖ್ಯವಾಹಿನಿಗೆ ತರಬೇಕು. ಮುಖ್ಯವಾಗಿ ಗುರುತಿನ ಚೀಟಿಯೊಂದಿಗೆ ಸರಕಾರದಿಂದ ಸಿಗುವ ಸವಲತ್ತುಗಳನ್ನು ಇಂತಹ ಮಕ್ಕಳಿಗೆ ನೀಡುವ ಮೂಲಕ ಅವರನ್ನು ಸಾಮಾನ್ಯ ಜನರಂತೆ ನೋಡಿಕೊಳ್ಳ ಬೇಕುಎಂದು ಹೇಳಿದರು.

ಸೋಮವಾರಪೇಟೆ ಇನ್ನರ್ ವೀಲ್ ಕ್ಲಬ್‌ನÀ ಅಧ್ಯಕ್ಷೆ ಆಶಾ ಮಾತನಾಡಿ, ಸ್ವಸ್ಥ ಸಂಸ್ಥೆ ವಿಶೇಷಚೇತನರ ಬಗ್ಗೆ ವಿಶೇಷ ಕಾಳಜಿ ವಹಿಸಿ ಅವರ ಮುಂದಿನ ಭವಿಷ್ಯದ ದಾರಿದೀಪವಾಗಿದೆ ಎಂದು ಹೇಳಿದರು. ಮಡಿಕೇರಿ ಇನ್ನರ್ ವೀಲ್ ಕ್ಲಬ್‌ನÀ ಅಧ್ಯಕ್ಷೆ ಲತಾ ಚಂಗಪ್ಪ ಮಾತನಾಡಿ ವಿಶೇಷಚೇತನರ ಪೋಷಕರು ಚಿಂತೆ ಮಾಡದೆ ಮಕ್ಕಳ ಬಗ್ಗೆ ಕಾಳಜಿ ವಹಿಸಿ ಪ್ರೋತ್ಸಾಹ ನೀಡಿ ಬೆಳೆಸಬೇಕೆಂದರು.

ಸ್ವಸ್ಥ ಶಾಲೆಯ ಫಿಸಿಯೋಥೆರಪಿಸ್ಟ್ ರಾಮಜೀ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವಸ್ಥ ಸಂಸ್ಥೆಯ ನಿರ್ದೇಶಕಿ ಆರತಿ ಸೋಮಯ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಗಿಫ್ಟ್ ಏಬಲ್ಡ್ ಇಂಡಿಯಾ ಸಂಸ್ಥೆಯ ಸಹಯೋಗದಿಂದ ಸೋಮವಾರಪೇಟೆ ಮತ್ತು ಮಡಿಕೇರಿ ತಾಲೂಕಿನ ಇನ್ನರ್ ವೀಲ್ ಕ್ಲಬ್‌ನ ಸಹಕಾರದಿಂದ ಸ್ವಸ್ಥ ಸಂಸ್ಥೆಯ ಸಮುದಾಯ ಆಧಾರಿತ ಪುನರ್ವಸತಿ ಕಾರ್ಯಕ್ರಮದಡಿಯಲ್ಲಿ ೧೬ ವಿಶೇಷಚೇತನರಿಗೆ ಉಚಿತವಾಗಿ ಗಾಲಿಕುರ್ಚಿ, ರೋಲೇಟರ್, ವಾಕರ್ ಸೇರಿದಂತೆ ಒಂದು ಲಕ್ಷ ಮೌಲ್ಯದ ಸಾಧನಗಳನ್ನು ವಿತರಿಸಲಾಯಿತು. ೨೮ ವಿಶೇಷಚೇತನರಿಗೆ ಮುಂದಿನ ತಿಂಗಳಲ್ಲಿ ಸಾಧನ ಸಲಕರಣೆಗಳನ್ನು ನೀಡುವ ಸಲುವಾಗಿ ಅಳತೆ ತೆಗೆದುಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ವಿಶೇಷ ಶಿಕ್ಷಕಿ ಮಂಜುಳ ಸ್ವಾಗತಿಸಿ, ಲಲಿತಾ ನಿರೂಪಿಸಿ, ಸಿ.ಬಿ.ಆರ್. ಸಂಯೋಜಕ ಮುರುಗೇಶ್ ವಂದಿಸಿದರು.