ಮಡಿಕೇರಿ, ಮಾ. ೧೯: ಸೋಮವಾರಪೇಟೆಯಲ್ಲಿ ಖಾಯಂ ಅಗ್ನಿಶಾಮಕ ಠಾಣೆಯನ್ನು ೨೦೨೨-೨೩ ನೇ ಸಾಲಿನಲ್ಲಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಗೃಹÀ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಶಾಸಕ ಅಪ್ಪಚ್ಚು ರಂಜನ್ ಅವರ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದಾರೆ. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ೨೦೨೧-೨೨ನೇ ಸಾಲಿನಿಂದ ೨೦೨೫-೨೬ನೇ ಸಾಲಿನವರೆಗೆ ಕೆ-ಸೇಫ್-೨ ಯೋಜನೆಯನ್ನು ರೂಪಿಸಲಾಗಿದೆ, ಇದರಂತೆ ಸೋಮವಾರಪೇಟೆಯಲ್ಲಿ ಅಗ್ನಿಶಾಮಕ ಠಾಣೆಯನ್ನು ನಿರ್ಮಿಸಲು ಕೆ-ಸೇಫ್-೨ ಯೋಜನೆಯಡಿಯಲ್ಲಿ ರೂ. ೩ ಕೋಟಿ ಅನುದಾನವನ್ನು ಮೀಸಲಿಡಲಾಗಿದೆ. ೨೦೨೨-೨೩ನೇ ಸಾಲಿನಲ್ಲಿ ಇದನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಕೊಡಗಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಒಟ್ಟು ೫೫೨೨ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ೪೯೬೪ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಪತ್ತೆಯಾಗದ ಡಕಾಯಿತಿ, ಸುಲಿಗೆ. ದರೋಡೆ ಮತ್ತಿತರ ಅಪರಾಧ ಪ್ರಕರಣಗಳನ್ನು ಪತ್ತೆ ಮಾಡುವ ಬಗ್ಗೆ ವಿಶೇಷ ತಂಡವನ್ನು ರಚಿಸಲಾಗಿದ್ದು ಈ ತಂಡವು ಕಾರ್ಯಾಚರಣೆ ನಡೆಸುತ್ತಿದೆ ಎಂದು ಸಚಿವರು ಶಾಸಕ ರಂಜನ್ ಪ್ರಶ್ನೆಗೆ ಉತ್ತರಿಸಿದ್ದಾರೆ.