ಗೋಣಿಕೊಪ್ಪ ವರದಿ, ಮಾ. ೨೦ : ಬೆಳೆ ಮಾರಾಟ ಸಂದರ್ಭ ವ್ಯಾಪಾರಿಗಳಿಂದ ನಡೆಯುತ್ತಿರುವ ತೂಕದಲ್ಲಿನ ಮೋಸ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಕೊಡಗು ಹಿತರಕ್ಷಣಾ ಸಮಿತಿ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಮಲಚೀರ ಅಯ್ಯಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳಲಾಯಿತು.
ಜಿಲ್ಲೆಯಲ್ಲಿ ಕಾಫಿ, ಕರಿಮೆಣಸು ಮಾರಾಟ ಮಾಡುವಾಗ ಸಾಕಷ್ಟು ವ್ಯಾಪಾರಿಗಳು ತೂಕದಲ್ಲಿ ವ್ಯತ್ಯಾಸ ಮಾಡಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ರೈತ ನಷ್ಟ ಅನುಭವಿಸುತ್ತಿದ್ದಾನೆ. ಇದರಿಂದ ಮೋಸವಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಕ್ರಮಕೈಗೊಳ್ಳುವುದಾಗಿ ಅಧಿಕಾರಿ ಭರವಸೆ ನೀಡಿದರು.
ಬಿರುನಾಣಿ ಗ್ರಾಮ ವ್ಯಾಪ್ತಿಗೆ ಪ್ರತ್ಯೇಕ ಪೊಲೀಸ್ ಠಾಣೆ ಅವಶ್ಯಕತೆ ಇದೆ. ಗ್ರಾಮ ಮಟ್ಟದಲ್ಲಿ ಪೊಲೀಸ್ ಇಲಾಖೆಯಿಂದ ಸಾರ್ವಜನಿಕ ಸಭೆ ನಡೆಸಿ ಕೊರತೆ ನೀಗಿಸುವ ಪ್ರಯತ್ನ ನಡೆಸಬೇಕು ಎಂದು ಮನವಿ ಮಾಡಿಕೊಳ್ಳಲಾಯಿತು.
ಈ ಸಂದರ್ಭ ಸಮಿತಿ ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ, ಕಾರ್ಯಾಧ್ಯಕ್ಷ ಬಾಚೀರ ಕಾರ್ಯಪ್ಪ, ಉಪಾಧ್ಯಕ್ಷ ನಾಟೋಳಂಡ ಚರ್ಮಣ, ಪ್ರ. ಕಾರ್ಯದರ್ಶಿ ಅರಮಣಮಾಡ ಸತೀಶ್ ದೇವಯ್ಯ, ಪ್ರಮುಖರಾದ ಚೊಟ್ಟೆಯಂಡಮಾಡ ವಿಶ್ವನಾಥ್, ಕಾಳಿಮಾಡ ಬೆಳ್ಯಪ್ಪ, ಕೂಪದೀರ ಉತ್ತಪ್ಪ, ಪಟ್ಟಮಾಡ ಗಿರಿ ಪೂವಣ್ಣ ಇದ್ದರು.