ಮಡಿಕೇರಿ, ಮಾ. ೧೮: ೨೦೨೨ರ ಅಂತ್ಯಕ್ಕೆ ಸೋಮವಾರಪೇಟೆ ತಾಲೂಕಿನ ತೋಳೂರು ಶೆಟ್ಟಳ್ಳಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿ ಅಂಬೇಡ್ಕರ್ ವಸತಿ ಶಾಲೆ ಪೂರ್ಣಗೊಳ್ಳಲಿದೆ ಎಂದು ಅಧಿವೇಶನದಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಪ್ರಶ್ನೆಗೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಉತ್ತರಿಸಿದರು.

ಕಾಮಗಾರಿ ವಿಳಂಬವಾಗಲು ಕಾರಣವೇನು? ಎಂದು ರಂಜನ್ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಕೆಪಿಟಿಸಿಎಲ್ ನಿಯಮಾನುಸಾರ ರೂ ೨೪೨೧.೮೭ ಲಕ್ಷಗಳಿಗೆ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ. ೨೧-೦೧-೨೦೨೧ ರಿಂದ ಕಾಮಗಾರಿ ಆರಂಭವಾಗಿದ್ದು, ಪ್ರಸ್ತುತ ಶಾಲಾ ಕಟ್ಟಡದ ನೆಲಮಹಡಿ ಮತ್ತು ಮೊದಲನೇ ಮಹಡಿ ಆರ್.ಸಿ.ಸಿ ಛಾವಣಿ ಪೂರ್ಣಗೊಂಡಿದ್ದು, ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದೆ. ವಸತಿ ನಿಲಯಗಳ ಕಾಮಗಾರಿಯೂ ಪ್ರಗತಿ ಹಂತದಲ್ಲಿದೆ. ಕಾಮಗಾರಿಯ ನಿವೇಶನದಲ್ಲಿ ಅರಣ್ಯ ಇಲಾಖೆಯ ಮರಗಳಿದ್ದು, ಅರಣ್ಯ ಇಲಾಖೆಯ ಅನುಮತಿ ಪಡೆದು ಮರಗಳನ್ನು ತೆರವುಗೊಳಿಸುವಲ್ಲಿ ಹಾಗೂ ಕೊರೊನಾ ಪರಿಸ್ಥಿತಿಯಲ್ಲಿ ವಿಳಂಬ ಉಂಟಾಗಿದೆ ಎಂದು ಮಾಹಿತಿ ನೀಡಿದರು.