ಕುಶಾಲನಗರ, ಮಾ.೧೭: ಚಿತ್ರನಟ ಪುನಿತ್ ರಾಜಕುಮಾರ್ ಹುಟ್ಟು ಹಬ್ಬ ಪ್ರಯುಕ್ತ ಕುಶಾಲನಗರದಲ್ಲಿ ಹಲವು ಕಾರ್ಯಕ್ರಮಗಳು ನಡೆದವು.
ಸ್ಥಳೀಯ ಗೌಡ ಸಮಾಜ ಮತ್ತು ಲಯನ್ಸ್ ಕ್ಲಬ್ ಆಶ್ರಯದಲ್ಲಿ ಕುಶಾಲನಗರ ಗೌಡ ಸಮಾಜ ಕಲ್ಯಾಣ ಮಂಟಪದಲ್ಲಿ ರಕ್ತದಾನ ಶಿಬಿರ ನಡೆಯಿತು.
ಮೈಸೂರಿನ ಸಂತ ಜೋಸೆಫ್ ಹಾಸ್ಪಿಟಲ್ನ ವೈದ್ಯಾಧಿಕಾರಿಗಳು ಮತ್ತು ತಂಡದ ಸಹಯೋಗದೊಂದಿಗೆ ರಕ್ತ ದಾನ ಶಿಬಿರ ನಡೆಯಿತು.
ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿಗಳು ಪಾಲ್ಗೊಂಡರು. ರಕ್ತದಾನಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷ ಟಿ.ಕೆ ರಾಜಶೇಖರ್, ಗೌಡ ಸಮಾಜದ ಅಧ್ಯಕ್ಷ ಕೂರನ ಪ್ರಕಾಶ್ ನೇತೃತ್ವದಲ್ಲಿ ನಡೆದ ಶಿಬಿರವನ್ನು ಡಾ. ಮಹಮ್ಮದ್ ಇಬ್ರಾಹಿಂ ನೇತೃತ್ವದ ವೈದ್ಯರು ಮತ್ತು ಸಿಬ್ಬಂದಿಗಳು ನಡೆಸಿಕೊಟ್ಟರು.
ಈ ಸಂದರ್ಭ ಗೌಡ ಸಮಾಜದ ಪ್ರಮುಖರಾದ ಎಂ.ಕೆ. ಗಣೇಶ್, ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ಸುಮನ್, ಹೇಮಂತ್, ಪೊನ್ನಚ್ಚನ ಮೋಹನ್, ಕೊಡಗನ ಹರ್ಷ, ಕವಿತಾ ಮೋಹನ್ ಮತ್ತಿತರರು ಇದ್ದರು.
* ಕುಶಾಲನಗರ - ಮಡಿಕೇರಿ ರಸ್ತೆಯ ಚಲನಚಿತ್ರ ಮಂದಿರದ ಆವರಣದಲ್ಲಿ ಬೈಚನಹಳ್ಳಿ ಗೆಳೆಯರ ಬಳಗ ವತಿಯಿಂದ ಪುನಿತ್ ಅಭಿಮಾನಿಗಳಿಗೆ ಮತ್ತು ಸಾರ್ವಜನಿಕರಿಗೆ ಅನ್ನದಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.