ಪೊನ್ನಂಪೇಟೆ, ಮಾ. ೧೭: ಪ್ರತಿವರ್ಷ ನಡೆಯುವ ಇತಿಹಾಸ ಪ್ರಸಿದ್ಧ ಗುಂಡಿಕೆರೆ ಮಖಾಂ ಉರೂಸ್ ತಾ. ೨೦ ರಿಂದ ೨೨ ರವರೆಗೆ ಜರುಗಲಿದೆ. ವೀರಾಜಪೇಟೆ ಸಮೀಪದ ಗುಂಡಿಕೆರೆಯ ದರ್ಗಾ ಶರೀಫ್‌ನಲ್ಲಿ ಅಂತಿಮ ವಿಶ್ರಾಂತಿ ಪಡೆಯುತ್ತಿರುವ ವಲಿಯುಲ್ಲಾ ಅವರ ಹೆಸರಿನಲ್ಲಿ ವಾರ್ಷಿಕವಾಗಿ ಆಚರಿಸಲ್ಪಡುವ ಗುಂಡಿಕೆರೆ ಮಖಾಂ ಉರೂಸ್ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಗುಂಡಿಕೆರೆ ಜಮಾಅತ್‌ನ ಆಡಳಿತ ಮಂಡಳಿ ತಿಳಿಸಿದೆ.

ತಾ. ೨೦ ರಂದು ಮಧ್ಯಾಹ್ನದ ನಂತರ ೪.೧೫ ಗಂಟೆಗೆ ಗುಂಡಿಕೆರೆ ಜಮಾಅತ್‌ನ ಆಡಳಿತ ಮಂಡಳಿ ಅಧ್ಯಕ್ಷ ಕೆ.ಯು. ಮಹಮ್ಮದ್ ಹಾಜಿ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ತಾ. ೨೧ ರಂದು ಮಧ್ಯಾಹ್ನ ಜರುಗುವ ಉರೂಸ್‌ನ ಪ್ರಧಾನ ಸಮಾರಂಭವನ್ನು ಗುಂಡಿಕೆರೆ ಜಮಾಅತ್‌ನ ಜಾಹಫರ್ ಮಿಸ್ಬಾಯಿ ಅವರು ಉದ್ಘಾಟಿಸಲಿದ್ದಾರೆ. ತಾ. ೨೧ ರಂದು ಸಂಜೆ ೪ ಗಂಟೆಗೆ ಉರೂಸ್‌ನ ಭಾಗವಾಗಿ ಮೌಲೂದ್ ಪಾರಾಯಣ ಹಾಗೂ ಸಾಮೂಹಿಕ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ತಾ. ೨೨ ರಂದು ರಾತ್ರಿ ವಿಶೇಷ ಧಾರ್ಮಿಕ ಉಪನ್ಯಾಸ ಹಾಗೂ ಧಿಕ್ರ ದುಅ ಮಜ್ಲಿಸ್ ಸಂಗಮವನ್ನು ಆಯೋಜಿಸಲಾಗಿದೆ.

ಮುಖ್ಯ ಅತಿಥಿಗಳಾಗಿ ಜಮಾಅತ್‌ನ ಖತೀಬ ಪಿ. ಇಸ್ಮಾಯಿಲ್ ಲತೀಫಿ, ಚಿಟ್ಟಡೆ ಜಮಾಅತ್‌ನ ಖತೀಬ ಸಯ್ಯದ್ ಅಹಮದ್ ಖಾಸಿಂ ಆದೂರು, ಬೆಂಗಳೂರಿನ ಆಯಿಷಾ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಕುವೆಂಡ ವೈ. ಹಂಝತ್ತುಲ್ಲಾ ಹಾಜಿ, ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ, ಬೆಂಗಳೂರಿನ ಉದ್ಯಮಿ ಎ.ಹೆಚ್. ಅಬೂಬಕರ್, ಸುಡಾನ್‌ನಲ್ಲಿ ಉದ್ಯಮಿಯಾಗಿರುವ ಎಂ.ಹೆಚ್. ಮೊಯ್ದು, ಬೆಂಗಳೂರಿನ ವಕೀಲ ಕೆ.ಎಂ. ಝಬೈರ್, ಜಮಾಅತ್‌ನ ಉಪಾಧ್ಯಕ್ಷ ಎಂ.ವೈ. ಆಲಿ ಹಾಗೂ ಜಮಾಅತ್‌ನ ಕೋಶಾಧಿಕಾರಿ ಎಂ.ಎA. ಅಲಿ ಮುಸ್ಲಿಯಾರ್ ಅವರು ಪಾಲ್ಗೊಳ್ಳಲಿದ್ದಾರೆ. ಉರೂಸ್ ನಡೆಯುವ ೩ ದಿನಗಳ ಕಾಲವೂ ಮಗ್ರಿಬ್ ನಮಾಜಿನ ನಂತರ ದಫ್ ಕಾರ್ಯಕ್ರಮವಿರುತ್ತದೆ. ಎಲ್ಲಾ ದಿನಗಳ ಕಾರ್ಯಕ್ರಮಗಳಿಗೂ ಮಹಿಳೆಯರಿಗೆ ಪ್ರತ್ಯೇಕ ಸ್ಥಳವಕಾಶವನ್ನು ಏರ್ಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.