ವೀರಾಜಪೇಟೆ, ಮಾ. ೧೭ : ಗ್ರಾಮದ ಮನೆಯೊಂದರಲ್ಲಿ ಕುಟುಂಬದ ಮಂದಿ ಮಧ್ಯೆಯ ಒಳ ಜಗಳ ಬಿಡಿಸಲು ಹೋದ ಪಂಚಾಯಿತಿ ಸದಸ್ಯನಿಗೆ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಒಡ್ಡಿದ ಘಟನೆ ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮದಲ್ಲಿ ನಡೆದಿದೆ.
ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತರ್ಮೆಮೊಟ್ಟೆ ಗ್ರಾಮದ ನಿವಾಸಿ ಮತ್ತು ಕೆದಮುಳ್ಳೂರು ಗ್ರಾಮ ಪಂಚಾಯಿತಿ ಸದಸ್ಯ ಎಂ.ಎA. ಪರಮೇಶ್ವರ ದಂಪತಿಗಳ ವಿರುದ್ಧ ದೂರು ನೀಡಿದ್ದಾರೆ.
ಘಟನೆ ವಿವರ: ಕೆದಮುಳ್ಳೂರು ಗ್ರಾಮದ ನಿವಾಸಿಗಳಾದ ಕೆ.ಕೆ. ರಂಜಿತ್ ಮತ್ತು ಶೈನಿ ದಂಪತಿ ಸ್ವಗೃಹದಲ್ಲಿ ವಾಸವಾಗಿದ್ದಾರೆ. ರಂಜಿತ್ ಅವರ ತಂಗಿ ನಳಿನಿ ಕೇರಳದಿಂದ ಮಕ್ಕಳೊಂದಿಗೆ ಮನೆಗೆ ಆಗಮಿಸಿದ್ದರು. ತಾ. ೧೫ ರಂದು ರಾತ್ರಿ ರಂಜಿತ್ ಮತ್ತು ಅಣ್ಣ ಸಂತೋಷ್ ನಡುವೆ ಜಗಳವಾಗಿದ್ದು ಜಗಳ ಬಿಡಿಸಲು ಹೋದ ತಂಗಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನು ನೋಡಿದ ತಂಗಿಯ ಮಗಳು ಲೇಖಾ ಅವರು ಪಂಚಾಯಿತಿ ಸದಸ್ಯ ಪರಮೇಶ್ವರ ಅವರಿಗೆ ದೂರವಾಣಿ ಸಂಪರ್ಕ ಮಾಡಿ ಮನೆಯಲ್ಲಿ ಜಗಳವಾಗುತ್ತಿದೆ ಎಂದು ಹೇಳಿದ್ದಾರೆ. ಪರಮೇಶ್ವರ ಅವರು ರಾತ್ರಿಯಾಗಿದೆ ಬರಲು ಕಷ್ಟಸಾಧ್ಯ ಎಂದು ಹೇಳಿದ್ದಾರೆ. ನಂತರದಲ್ಲಿ ನಳಿನಿ ಅವರು ದೂರವಾಣಿ ಕರೆ ಮಾಡಿದ್ದಾರೆ. ಕರೆಯ ಮೇರೆಗೆ ಪೊಲೀಸ್ ಸಹಾಯ ವಾಣಿ ೧೧೨ಗೆ ಪರಮೇಶ್ವರ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಈ ಮಧ್ಯೆ ಮನೆಗೆ ತೆರಳಿದ್ದಾರೆ. ವಿಷಯ ತಿಳಿದು ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಈ ಸಂದÀರ್ಭ ಅಣ್ಣ ತಮ್ಮಂದಿರ ಮಧ್ಯೆ ನಡೆಯುತ್ತಿದ್ದ ಜಗಳ ಬಿಡಿಸುವ ವೇಳೆ ರಂಜಿತ್ ಮತ್ತು ಶೈನಿ ದಂಪತಿ ಏಕಾಏಕಿ ಸದಸ್ಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಗೂ ಜಾತಿ ನಿಂದನೆ ಮಾಡಿದ್ದಾರೆ. ತಾ. ೧೬ ರಂದು ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ರಂಜಿತ್ ಮತ್ತು ಶೈನಿ ದಂಪತಿ ವಿರುದ್ಧ ಪರಮೇಶ್ವರ ಅವರು ಜಾತಿ ನಿಂದನೆ ಮತ್ತು ಕೊಲೆ ಬೆದರಿಕೆ ಪ್ರಕರಣ ದಾಖಲಿಸಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ದೂರು ದಾಖಲಾದ ವ್ಯಕ್ತಿಗಳ ವಿರುದ್ಧ ಜಾತಿ ನಿಂದನೆ ಮತ್ತು ಕೊಲೆ ಬೆದರಿಕೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
- ಕಿಶೋರ್ ಕುಮಾರ್ ಶೆಟ್ಟಿ