ಸೋಮವಾರಪೇಟೆ, ಮಾ.೧೭: ಕನ್ನಡ ಚಿತ್ರರಂಗದ ಹೆಸರಾಂತ ನಟ ಪುನಿತ್ ರಾಜ್ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಪಟ್ಟಣದಲ್ಲಿ ಅಭಿಮಾನಿಗಳ ಸಂಘದ ವತಿಯಿಂದ ಸಾರ್ವಜನಿಕರಿಗೆ ಅನ್ನದಾನ ಹಾಗೂ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಕಾರ್ಯಕ್ರಮ ನಡೆಯಿತು.
ಅಭಿಮಾನಿಗಳ ಸಂಘದ ವತಿಯಿಂದ ಇಲ್ಲಿನ ಜೇಸೀ ವೇದಿಕೆಯಲ್ಲಿ ಪುನಿತ್ ರಾಜ್ಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಮಧ್ಯಾಹ್ನ ನೂರಾರು ಮಂದಿಗೆ ಅನ್ನದಾನ ಮಾಡÀಲಾಯಿತು. ಇದರೊಂದಿಗೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ನೀಡಲಾಯಿತು.
ಈ ಸಂದರ್ಭ ಆಸ್ಪತ್ರೆಯ ವೈದ್ಯರಾದ ಸತೀಶ್ಕುಮಾರ್, ಡಾ. ಕಿರಣ್, ಪುನಿತ್ ಅಭಿಮಾನಿಗಳ ಬಳಗದ ಮಂಜುನಾಥ್, ಈಶ, ಜಗನ್ನಾಥ್, ಸಂದೀಪ್, ಸುಮಂತ್, ವಿನೋದ್, ಪ್ರದೀಪ್, ಗೌರಮ್ಮ, ಭಾನುಮತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನೇರುಗಳಲೆಯಲ್ಲಿ: ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿಯ ಗ್ರಂಥಾಲಯದಲ್ಲಿ ಪುನಿತ್ ರಾಜ್ಕುಮಾರ್ ಜನ್ಮದಿನಾಚರಣೆ ನಡೆಯಿತು. ಕಾರ್ಯಕ್ರಮದಲ್ಲಿ ಸೋಮವಾರಪೇಟೆ ಪಟ್ಟಣದ ಮಹಿಳಾ ಆಟೋ ಚಾಲಕಿ ಪ್ರಮೀಳಾ ಹಾಗೂ ನೇರುಗಳಲೆ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಇಬ್ರಾಹಿಂ ಅವರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಗಂಗಾಧರ್ ಸೇರಿದಂತೆ ಪದಾಧಿಕಾರಿಗಳು, ತಾ.ಪಂ. ಮಾಜಿ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ, ಗ್ರಾ.ಪಂ. ಸದಸ್ಯರುಗಳು, ಪ್ರಮುಖರಾದ ರವಿಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.