ವೀರಾಜಪೇಟೆ, ಮಾ. ೧೭: ವೀರಾಜಪೇಟೆ ಪಟ್ಟಣ ಪಂಚಾಯಿತಿ ಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸಂಬಳರಹಿತವಾಗಿ ದುಡಿಯುತ್ತಿರುವ ೧೩ ಪೌರಕಾರ್ಮಿಕರನ್ನು ಖಾಯಂ ಗೊಳಿಸುವಂತೆ ಆಗ್ರಹಿಸಿ ಇತ್ತೀಚೆಗೆ ಪುರಭವನದಲ್ಲಿ ನಡೆದ ಪೌರ ಕಾರ್ಮಿಕರ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಅಖಿಲ ಕರ್ನಾಟಕ ಅರುಂಧತಿ ಯಾರ್ ಮಹಾಸಭಾ ರಾಜ್ಯ ಉಪಾಧ್ಯಕ್ಷ ಪಳನಿ ಪ್ರಕಾಶ್ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕಳೆದ ನಾಲ್ಕು ವರ್ಷಗಳ ಹಿಂದೆ ಸರ್ಕಾರದ ನೀತಿಯಿಂದಾಗಿ ಪೌರಕಾರ್ಮಿಕರು ಕೆಲಸ ಕಳೆದುಕೊಂಡರು. ಬಳಿಕ ಪೌರಕಾರ್ಮಿಕರ ಸಂಘದ ಮಾತಿನಂತೆ ಇವರು ಪ್ರತಿನಿತ್ಯ ಪಟ್ಟಣ ಪಂಚಾಯಿತಿಯಲ್ಲಿ ಬೆಳಿಗ್ಗೆ ೫ ರಿಂದ ದುಡಿಯುತ್ತಿದ್ದಾರೆ. ಕೋವಿಡ್ ಮಹಾಮಾರಿಯಂತಹ ಕ್ಲಿಷ್ಟ ಸಮಯದಲ್ಲೂ ಸರ್ಕಾರ ಇವರ ಸೇವೆಯನ್ನು ಗುರುತಿಸುವ ಕೆಲಸ ಮಾಡಲಿಲ್ಲ. ಅಲ್ಲದೇ ಪಟ್ಟಣ ಪಂಚಾಯಿತಿ ಹಬ್ಬ ಹರಿದಿನ ಬಂದಾಗ ಮಾತ್ರ ಇವರಿಗೆ ಸಾವಿರ ಎರಡು ಸಾವಿರ ಎಂದು ಹಣಕೊಟ್ಟು ಕೈತೊಳೆದುಕೊಳ್ಳುತ್ತಿದೆ. ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು ಪಟ್ಟಣ ಪಂಚಾಯಿತಿಯಲ್ಲಿ ಖಾಲಿಯಿರುವ ಹುದ್ದೆಗೆ ಇವರನ್ನು ನೇಮಿಸುವ ಮೂಲಕ ಇವರ ಸೇವೆಯನ್ನು ಖಾಯಂಗೊಳಿಸಬೇಕು ಎಂದು ಸಭೆಯಲ್ಲಿ ಆಗ್ರಹ ಮಾಡಿದರು.
ಪೌರಕಾರ್ಮಿಕರಿಗೆ ಅಗತ್ಯ ವಿಶ್ರಾಂತಿ ಗೃಹ, ಶೌಚಾಲಯ, ಪೌರಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಬೇಕು. ಅವರಿಗೆ ಸಲ್ಲಬೇಕಾದ ಇ.ಎಫ್, ಪಿ.ಎಫ್ ನೀಡದೇ ವಂಚಿಸಿದ್ದು ಇವರಿಗೆ ಸೂಕ್ತ ನ್ಯಾಯ ಒದಗಿಸಬೇಕು. ಅನಾರೋಗ್ಯದಿಂದ ಮೃತಪಟ್ಟ ಪೌರಕಾರ್ಮಿಕರ ಕುಟುಂಬದವರಿಗೆ ಅನುಕಂಪದ ಆಧಾರದ ಮೇಲೆ ತಕ್ಷಣವೇ ಕೆಲಸ ನೀಡಬೇಕು. ವಸತಿ ಯೋಜನೆ ಯಡಿಯಲ್ಲಿ ಪೌರಕಾರ್ಮಿಕರಿಗೆ ಮನೆ ನಿರ್ಮಾಣ ಮಾಡಿಕೊಡಬೇಕು ಎಂದು ಒತ್ತಾಯ ಮಾಡಿದರು. ಪ್ರಾರಂಭಿಕ ಹಂತವಾಗಿ ಈಗ ಸಭೆ ನಡೆಸಿ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರಲಾಗುತ್ತಿದೆ. ಮನವಿಗೆ ಸ್ಪಂದಿಸದಿದ್ದಲ್ಲಿ ಹೋರಾಟ ನಡೆಸಲು ಸಭೆಯಲ್ಲಿ ತೀರ್ಮಾನ ಮಾಡಲಾಯಿತು.
ಸಭೆಯಲ್ಲಿ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ರಂಗಸ್ವಾಮಿ, ಪಟ್ಟಣ ಪಂಚಾಯಿತಿ ಸದಸ್ಯ ಜಲೀಲ್, ಪೌರಕಾರ್ಮಿಕರಾದ ನವೀನ್, ನಾಗೇಶ್, ಕುಮಾರ್, ವಿನೋದ್, ರಾಧ, ಕವಿತಾ, ಸರಸ್ವತಿ, ಪೊನ್ನುಸ್ವಾಮಿ, ವಿಜಯಲಕ್ಷಿö್ಮ, ಗೌರಿ ಹಾಜರಿದ್ದರು.