ಮಡಿಕೇರಿ, ಮಾ. ೧೭: ಪ್ರಸ್ತುತ ಬೇಸಿಗೆ ಆರಂಭಗೊAಡಿದ್ದು ದಿನೇ ದಿನೇ ಬಿಸಿಲಿನ ತಾಪ ಅಧಿಕಗೊಳ್ಳುತ್ತಿದೆ. ಈ ಸಮಯದಲ್ಲಿ ಕೃಷಿ ಪ್ರಧಾನವಾದ ಹಾಗೂ ಕಾಫಿ ಬೇಳೆ ಅವಲಂಬಿತವಾಗಿರುವ ಜಿಲ್ಲೆಯಲ್ಲಿ ಕಾಫಿಗೆ ಹೂಮಳೆ ತೀರಾ ಅಗತ್ಯವಾಗಿದ್ದು, ಬೆಳೆಗಾರರು ಈ ತೋಟಕ್ಕೆ ನೀರು ಹಾಯಿಸುವ ಅನಿವಾರ್ಯತೆಯೊಂದಿಗೆ ಮಳೆಯ ನಿರೀಕ್ಷೆಯಲ್ಲಿದ್ದಾರೆ. ನೀರಿನ ವ್ಯವಸ್ಥೆಯಿರುವವರು, ಸೌಲಭ್ಯ ಇರುವವರು ಖರ್ಚನ್ನು ಲೆಕ್ಕಿಸದೆ ನೀರಾವರಿ ಕೆಲಸದಲ್ಲಿ ತೊಡಗಿದ್ದಾರೆ. ಸಂಕಷ್ಟದಲ್ಲಿರುವವರು ಮಳೆಯನ್ನೇ ಆಶ್ರಯಿಸಬೇಕಾಗಿದೆ.
ಕಳೆದ ಕೆಲ ದಿನಗಳ ಹಿಂದೆ ನಾಪೋಕ್ಲು ವ್ಯಾಪ್ತಿಯಲ್ಲಿ ಮಾತ್ರ ಸುಮಾರು ೧.೫೦ ಇಂಚಿನಷ್ಟು ತೃಪ್ತಿದಾಯಕವಾದ ಮಳೆ ಸುರಿದಿದ್ದು, ಇನ್ನು ಕೆಲವೆಡೆ ಸಣ್ಣ ಪ್ರಮಾಣದಲ್ಲಿ ಸುರಿದು ಹೋಗಿರುವ ಮಳೆಯಿಂದಾಗಿ ಬೆಳೆಗಾರರು ಚಿಂತೆ ಅನುಭವಿಸುವಂತಾಗಿದೆ.
ಇದೀಗ ಹವಾಮಾನ ಇಲಾಖೆಯ ಮಾಹಿತಿಯಂತೆ ಹಿಂದೂ ಮಹಾಸಾಗರ ಮತ್ತು ನೈಋತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದ್ದು, ಕೊಡಗು ಸೇರಿದಂತೆ ಕೆಲವೆಡೆ ಮಳೆಯಾಗುವ ನಿರೀಕ್ಷೆ ಎದುರಾಗಿದೆ.
ತಾ. ೧೭ರಿಂದ ಒಂದೆರೆಡು ದಿನ ಮಳೆಯಾಗಬಹುದು ಎಂಬ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಜನರು ಇದರ ಆಶಾಭಾವನೆಯಲ್ಲಿದ್ದಾರೆ. ಕಳೆದ ವರ್ಷ ಫೆಬ್ರವರಿಯಿಂದಲೇ ವಾತಾವರಣದಲ್ಲಿ ಬದಲಾವಣೆ ಯಾಗಿದ್ದು ತುಸು ಬೇಗವಾದರೂ ಜಿಲ್ಲೆಯಾದ್ಯಂತ ಈ ಸಮಯಕ್ಕೆ ಅಗತ್ಯ ಮಳೆಯಾಗಿತ್ತು.