ಗೋಣಿಕೊಪ್ಪ ವರದಿ, ಮಾ. ೧೭: ಮಾಯಮುಡಿ ಪುನಿತ್‌ರಾಜ್‌ಕುಮಾರ್ ಅಭಿಮಾನಿ ಬಳಗದ ವತಿಯಿಂದ ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಟೆನ್ನಿಸ್‌ಬಾಲ್ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಲಾಯಿತು.

ಪದ್ಮಶ್ರೀ ಪುರಸ್ಕೃತ ಮೊಳ್ಳೇರ ಪಿ. ಗಣೇಶ್, ಉದ್ಯಮಿಗಳಾದ ಸಣ್ಣುವಂಡ ಎಂ. ಸುರೇಶ್, ಮಧು, ಬಸಂತ್‌ಕುಮಾರ್ ದೀಪ ಬೆಳಗಿಸಿ ಕ್ರೀಡಾಕೂಟ ಉದ್ಘಾಟಿಸಿದರು.

ಪುನಿತ್‌ರಾಜ್‌ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ನಂತರ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಆಚರಿಸಲಾಯಿತು. ಮಧ್ಯಾಹ್ನ ಅನ್ನದಾನ ನಡೆಯಿತು.

ಬಳಗದ ಕಾರ್ಯಕರ್ತರಾದ ಬಾನಂಡ ಕ್ರಿಶ್‌ರಾಜ್, ಅನೀಶ್, ಮಲ್ಲಿಕ, ಪ್ರವೀಣ್, ಉಮ್ಮರ್, ಅನೀಶ್ ಇದ್ದರು.

ಫಲಿತಾಂಶ: ಮೊದಲ ದಿನದ ಪಂದ್ಯಗಳಲ್ಲಿ ಸಿಸಿಟಿ ಕೋಬ್ರಾಸ್, ಎಂವೈಸಿ ಮಾಯಮುಡಿ, ಹುಂಡಿ ಫ್ರೀಡಂ ಬಾಯ್ಸ್ ತಂಡಗಳು ಗೆಲುವಿನ ನಗೆ ಬೀರಿದವು.

ಕೆಕೆಸಿ ಕೊಡಗು ತಂಡವನ್ನು ಸಿಸಿಟಿ ಕೋಬ್ರಾಸ್ ತಂಡ ೨ ರನ್‌ಗಳಿಂದ ಮಣಿಸಿತು. ಮಾಯಮುಡಿ ತಂಡವು ಕಾವೇರಿಯನ್ಸ್ ತಂಡವನ್ನು ೬ ವಿಕೆಟ್‌ಗಳಿಂದ ಸೋಲಿಸಿತು. ಹುಂಡಿ ಫ್ರೀಡಂ ಬಾಯ್ಸ್ ತಂಡವು ಫ್ರೆಂಡ್ಸ್ ಕ್ರಿಕೆಟರ್ಸ್ ತಂಡದ ವಿರುದ್ಧ ೫೬ ರನ್‌ಗಳಿಂದ ಗೆದ್ದು ಬೀಗಿತು. ಮಾ. ೨೦ ರವರೆಗೆ ಟೂರ್ನಿ ನಡೆಯಲಿದೆ.