ಕುಶಾಲನಗರ, ಮಾ. ೧೬ ಟಿಬೆಟಿಯನ್ ನೂತನ ವರ್ಷದ (ಲೋಸಾರ್) ಅಂಗವಾಗಿ ಕುಶಾಲನಗರ ಸಮೀಪದ ಬೈಲುಕೊಪ್ಪೆ ಟಿಬೆಟಿಯನ್ ಶಿಬಿರದಲ್ಲಿ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ. ಕೊಪ್ಪ ಸಮೀಪದ ಗೋಲ್ಡನ್ ಟೆಂಪಲ್ ಮಂದಿರದ ಆವರಣದಲ್ಲಿ ನೂತನ ವರ್ಷದ ಅಂಗವಾಗಿ ವಿಶ್ವದ ಅತಿದೊಡ್ಡ ಚಿತ್ರ-ಪರದೆಗಳ ಪ್ರದರ್ಶನ ನಡೆಯಿತು.

ಬೌದ್ಧ ಧರ್ಮಗುರು ಪದ್ಮಸಂಭವ ಅವರ ಬೃಹತ್ ಚಿತ್ರಪಟವನ್ನು ಗೋಲ್ಡನ್ ಟೆಂಪಲ್ ಅವರಣದಲ್ಲಿ ಅನಾವರಣಗೊಳಿಸಲಾಯಿತು. ಏಳು ಮಹಡಿಗಳ ಕಟ್ಟಡದ ಮೇಲೆ ೨೦೦ ಅಡಿ ಎತ್ತರ ೧೮೦ ಅಡಿ ಅಗಲದ ಪದ್ಮಸಂಭವ ಚಿತ್ರಪಟದ ಪ್ರದರ್ಶನ ನಡೆಯಿತು. ಕೇವಲ ಅರ್ಧ ಗಂಟೆಗಳ ಅವಧಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಟಿಬೆಟಿಯನ್ ಸಾಂಪ್ರದಾಯಿಕ ಪೂಜಾ ವಿಧಿ ವಿಧಾನಗಳು ಜರಗಿದವು. ಬೌದ್ಧ ಧರ್ಮ ಗುರುಗಳು ಸೇರಿದಂತೆ ಸಾವಿರಾರು ಟಿಬೆಟಿಯನ್ ನಾಗರಿಕರು, ಬೌದ್ಧ ಭಿಕ್ಷುಗಳು ಈ ಸಂದರ್ಭ ಇದ್ದರು.

ಇದೇ ಸಂದರ್ಭ ಗೋಲ್ಡನ್ ಟೆಂಪಲ್ ಮಂದಿರದಲ್ಲಿ ವಿಶ್ವಶಾಂತಿಗಾಗಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.