ಬಾಳೆಲೆ, ಮಾ. ೧೭: ಬಾಳೆಲೆ ಹೋಬಳಿ ವ್ಯಪ್ತಿಯ ೩ ಪ್ರೌಢಶಾಲೆಗಳ ೭೦ ಬಡ ವಿದ್ಯಾರ್ಥಿಗಳು ತಿತಿಮತಿ ಸರ್ಕಾರಿ ಪ್ರೌಢಶಾಲಾ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ಬೆಳಿಗ್ಗೆ ತೆರಳಲು ಬಸ್ ಸಂಚಾರದ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳ ಮನೋಸ್ಥೆöÊರ್ಯವನ್ನು ಕುಗ್ಗಿಸಿದೆ, ಬಾಳೆಲೆಯಿಂದ ಬೆಳಿಗ್ಗೆ ೮.೩೦ಕ್ಕೆ ಹೊರಟು ತಿತಿಮತಿಗೆ ೯ ಗಂಟೆಗೆ ತಲುಪಬೇಕಾದ ಖಾಸಗಿ ಬಸ್ ಸಂಚಾರಕ್ಕೆ ರಹದಾರಿ ಇದ್ದರೂ ಕಳೆದ ಒಂದು ವರ್ಷದಿಂದ ಅನ್ಯ ಮಾರ್ಗದಲ್ಲಿ ಸಂಚರಿಸುತ್ತಿದೆ. ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ವಿಷಯ ಗೊತ್ತಿದ್ದರೂ ಗೊತ್ತಿಲ್ಲದಂತೆ ವರ್ತಿಸುತಿದ್ದು, ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಮತ್ತು ಈ ಮಾರ್ಗದಲ್ಲಿ ಪ್ರತಿನಿತ್ಯ ಶಾಲಾ-ಕಾಲೇಜುಗಳಿಗೆ ಹೋಗುವ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ ಎಂದು ಬಾಳೆಲೆ ಗ್ರಾ.ಪಂ. ಪ್ರಮುಖರು ಹೇಳಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ತೆರಳಲು ಯಾವುದೇ ಅಡಚಣೆಗಳಾದರೆ ಅದಕ್ಕೆ ಜಿಲ್ಲಾಡಳಿತವೇ ನೇರ ಹೊಣೆಯಾಗಲಿದೆ. ಅಲ್ಲದೆ ಮಡಿಕೇರಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಘಟಕದಿಂದ ಬಾಳೆಲೆ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳ ಸಂಚಾರ ಸಮರ್ಪಕವಾಗಿಲ್ಲ. ಶಾಲಾ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಜಪುರದವರೆಗೆ ಸಂಚರಿಸುವ ಸರ್ಕಾರಿ ಬಸ್ ಸೇವೆಯನ್ನು ಕಿಸ್ತೂರಿನವರೆಗೆ ವಿಸ್ತರಿಸಲು ಕಳೆದ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಗ್ರಾಮ ಪಂಚಾಯಿತಿ ಅರ್ಜಿ ಸಲ್ಲಿಸಿದ್ದು, ಜಿಲ್ಲಾಧಿಕಾರಿಗಳು ಅಗತ್ಯ ಕ್ಕಮಕ್ಕೆ ಶಿಫಾರಸು ಮಾಡಿದ್ದರು. ಆದರೆ ಮಡಿಕೇರಿ ಘಟಕ ಯಾವುದೇ ಕ್ರಮ ಕೈಗೊಂಡಿಲ್ಲ. ಬಾಳೆಲೆ ಭಾಗದ ವಿವಿಧ ಗ್ರಾಮಗಳ ವಿದ್ಯಾರ್ಥಿಗಳಿಂದ ಬಸ್ ಪಾಸ್ ಮುಂಗಡ ಹಣ ಪಡೆದಿದ್ದು, ಚಾಲಕ ನಿರ್ವಾಹಕರ ಕೊರತೆ ಮುಂದಿಟ್ಟುಕೊAಡು ಪ್ರತಿನಿತ್ಯ ಒಂದಲ್ಲ ಒಂದು ಮಾರ್ಗ ಸ್ಥಗಿತಗೊಳಿಸಿ ವಿದ್ಯಾರ್ಥಿಗಳನ್ನು ವಂಚಿಸುತ್ತಿದೆ ಎಂದು ಅವರುಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಖಾಸಗಿ ಅಥವಾ ಸರ್ಕಾರಿ ಬಸ್ ಸೇವೆಗಳಲ್ಲಿನ ನ್ಯೂನತೆಗಳನ್ನು ಸರಿಪಡಿಸಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಹೋಗಿ ಬರಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳುವಂತೆ ಇಂದು ಬಾಳೆಲೆಯಲ್ಲಿ ನಡೆದ ಹತ್ತನೇ ತರಗತಿ ಪೋಷಕರ ಮತ್ತು ವಿದ್ಯಾರ್ಥಿಗಳ ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪೋಡಮಾಡ ಸುಖೇಶ್ ಭೀಮಯ್ಯ ಆಗ್ರಹಿಸಿದ್ದಾರೆ. ಬಾಳೆಲೆ ಸೆಂಟರ್ ಎಜುಕೇಶನ್ ಸೊಸೈಟಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಅವರು ಮಾತನಾಡಿ, ಮಕ್ಕಳಿಗೆ ಓದುವ ಸಮಯದಲ್ಲಿ ಪವರ್ ಕಟ್ ಮಾಡದೆ ವಿದ್ಯುತ್ ಒದಗಿಸಲು ಚೆಸ್ಕಾಂ ಅಧಿಕಾರಿಗಳನ್ನು ಅಗ್ರಹಿಸಿದರು. ಬಾಳೆಲೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕೊಕ್ಕೇಂಗಡ ಸ್ಮಿತಾ, ಸದಸ್ಯರಾದ ಮುಕ್ಕಾಟಿರ ಜಾನಕಿ, ಗ್ರೇಸಿ, ಪುಷ್ಪಚಂದ್ರ ಮತ್ತಿತರರು ಹಾಜರಿದ್ದರು.