ಸೋಮವಾರಪೇಟೆ, ಮಾ. ೧೬: ಇಲ್ಲಿನ ಶ್ರೀ ಮುತ್ತಪ್ಪ ಹಾಗೂ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ತಾ. ೨೦ರಿಂದ ವಾರ್ಷಿಕ ಜಾತ್ರೋತ್ಸವ ಹಾಗೂ ಬ್ರಹ್ಮಕಲಶೋತ್ಸವ ಪೂಜಾ ಕಾರ್ಯಗಳು ನಡೆಯಲಿವೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ. ವಿನೋದ್ ತಿಳಿಸಿದ್ದಾರೆ.

ತಾ. ೨೦ರಂದು ಬೆಳಿಗ್ಗೆ ೪.೩೦ಗಂಟೆಗೆ ಗಣಪತಿ ಹೋಮ, ೬ ಗಂಟೆಗೆ ಶುದ್ದೀಪುಣ್ಯ, ೬.೩೦ಕ್ಕೆ ಧ್ವಜಾರೋಹಣ, ಸಂಜೆ ೫.೩೦ಕ್ಕೆ ಕೊಳಪುರಂ ಮನಹಿಲ್ಲಂ ತಂತ್ರಿಗಳಾದ ಕೃಷ್ಣಕುಮಾರ್ ನೇತೃತ್ವದಲ್ಲಿ ವಿಶೇಷ ಆಶ್ಲೇಷ ಬಲಿ ಪೂಜೆಗಳು ನಡೆಯಲಿವೆ.

ತಾ ೨೧ರಂದು ಮಧ್ಯಾಹ್ನ ೧೨.೩೦ರಿಂದ ಉತ್ಸವ ಆರಂಭ ಪೂಜೆ, ಕಳಸ ಪೂಜೆ, ಮುತ್ತಪ್ಪ ದೇವರ ವೆಳ್ಳಾಟಂ, ವಿಷ್ಣುಮೂರ್ತಿ, ಕರಿಂಗುಟ್ಟಿ, ಕಂಡಕರ್ಣ, ಭಗವತಿ, ರಕ್ತ ಚಾಮುಂಡಿ, ಪೊಟ್ಟಣ್ ದೇವರುಗಳ ವೆಳ್ಳಾಟಂ ಹಾಗೂ ಕಳಿಕ್ಕಾಪಾಟ್ ನಡೆಯಲಿದ್ದು, ತಾ.೨೨ರಂದು ವಿವಿಧ ದೇವರುಗಳ ಕೋಲ ಜರುಗಲಿದೆ ಎಂದು ವಿನೋದ್ ತಿಳಿಸಿದ್ದಾರೆ.

ಇದರೊಂದಿಗೆ ಪ್ರತಿ ೧೨ ವರ್ಷಗಳಿಗೊಮ್ಮೆ ಜರುಗುವ ಬ್ರಹ್ಮಕಲಶೋತ್ಸವ ಪೂಜಾ ಕಾರ್ಯಗಳು ಮೇ ೨೧ರಿಂದ ೨೭ರವರೆಗೆ ದೇವಾಲಯದ ತಂತ್ರಿಗಳಾದ ಕಾಳೇಘಾಟ್ ನಾರಾಯಣನ್ ನಂಬೂದರಿ ನೇತೃತ್ವದಲ್ಲಿ ನಡೆಯಲಿದೆ.

ಈಗಾಗಲೇ ಶ್ರೀಮುತ್ತಪ್ಪ ಹಾಗೂ ಅಯ್ಯಪ್ಪ ಸ್ವಾಮಿ ದೇವಾಲಯದ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿದ್ದು, ದೇವಾಲಯದಲ್ಲಿ ಪಯಂಗುತ್ತಿ ಸೇವೆ, ಭುವನೇಶ್ವರಿ ದೇವಿಗೆ ಭಗವತಿ ಸೇವೆ, ಅಯ್ಯಪ್ಪ ದೇವರಿಗೆ ಶ್ರೀ ಶಾಸ್ತ ಸೇವೆ, ಶತ್ರು ಸಂಹಾರ ಪೂಜೆ, ವಿದ್ಯಾರಂಭ ಪೂಜೆ, ಮಕರ ಸಂಕ್ರಾAತಿ ಪೂಜೆ ಮಹಾಗಣಪತಿ ಹೋಮ, ನಾಗದೇವತೆ ಪೂಜೆ ಸೇರಿದಂತೆ ಇತರ ಪೂಜಾ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.