ಸೋಮವಾರಪೇಟೆ, ಮಾ. ೧೬: ಇಲ್ಲಿನ ‘ನಾವು ಪ್ರತಿಷ್ಠಾನ’ ವತಿಯಿಂದ ಹಕ್ಕಿಗೊಂದು ಗುಟುಕು ಅಭಿಯಾನದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಹಾಗೂ ಸಾರ್ವಜನಿಕ ವಿಭಾಗದಲ್ಲಿ ಹಕ್ಕಿಗಳಿಗೆ ನೀರುಣಿಸುವ ಸ್ಪರ್ಧೆ ಆಯೋಜಿಸಿದ್ದು, ವಿಜೇತರಿಗೆ ಬಹುಮಾನದೊಂದಿಗೆ ವೈಜ್ಞಾನಿಕ ಮಾದರಿಯಲ್ಲಿ ಪಕ್ಷಿಗಳ ವೀಕ್ಷಣೆಗೆ ಅವಕಾಶ ಕಲ್ಪಿಸಿದೆ.
ನಾವು ಪ್ರತಿಷ್ಠಾನದ ಸ್ಥಾಪಕರುಗಳಾದ ಕಿರಗಂದೂರು ಗ್ರಾಮದ ಗೌತಮ್ ಹಾಗೂ ಸುಮನ ಅವರುಗಳ ಆಲೋಚನೆಯಲ್ಲಿ ಈಗಾಗಲೇ ಪ್ರತಿಷ್ಠಾನದಿಂದ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಹಕ್ಕಿಗಳ ಉಳಿವು ಹಾಗೂ ಬೆಳವಣಿಗೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಬೇಸಿಗೆಯ ತಾಪದಲ್ಲಿ ಪಕ್ಷಿಗಳನ್ನು ಸಂರಕ್ಷಿಸಿಕೊಳ್ಳುವ ಮನೋಧರ್ಮವನ್ನು ಮೂಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.
ಬೇಸಿಗೆಯ ಝಳಕ್ಕೆ ತತ್ತರಿಸುವ ಪಕ್ಷಿಗಳಿಗೆ ಧಾನ್ಯ ಹಾಗೂ ನೀರು ಒದಗಿಸುವ, ಮಕ್ಕಳಲ್ಲಿ ಪಕ್ಷಿಗಳ ಬಗ್ಗೆ ಅರಿವು ಮೂಡಿಸಿ, ಪರಿಸರ ಸಮತೋಲನದಲ್ಲಿ ಪಕ್ಷಿಗಳ ಪಾತ್ರವನ್ನು ತಿಳಿಸುವ ನಿಟ್ಟಿನಲ್ಲಿ ನಾವು ಪ್ರತಿಷ್ಠಾನದಿಂದ ಸ್ಪರ್ಧೆ ಆಯೋಜಿಸಲಾಗಿದೆ.
ಸೋಮವಾರಪೇಟೆ ಸುತ್ತಮುತ್ತಲ ವ್ಯಾಪ್ತಿಯ ಶಾಲೆಗಳ ವಿದ್ಯಾರ್ಥಿಗಳಿಗೆ ‘ಪಕ್ಷಿಗಳಿಂದ ಮನುಕುಲಕ್ಕೇನು ಪ್ರಯೋಜನ?’ ಹಾಗೂ ‘ಪಕ್ಷಿಗಳ ಬಗ್ಗೆ ಕಾಳಜಿ ಇರಲಿ’ ಎಂಬ ವಿಷಯಗಳ ಬಗ್ಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿದೆ. ಇದರೊಂದಿಗೆ ಸಾರ್ವಜನಿಕ ವಿಭಾಗದಲ್ಲೂ ಪ್ರಬಂಧ ಬರೆದು, ಹಕ್ಕಿಗಳಿಗೆ ಆಹಾರ-ನೀರು ಇಡುವ ಸೆಲ್ಫೀ ತೆಗೆದು ತಾ. ೨೦ ರೊಳಗೆ ಮೊ: ೯೮೮೦೦೫೦೮೮೧ಗೆ ಕಳುಹಿಸಬಹುದಾಗಿದೆ.
ಸ್ಪರ್ಧೆಯಲ್ಲಿ ವಿಜೇತರಾಗುವ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವುದರೊಂದಿಗೆ, ಪಕ್ಷಿ ತಜ್ಞರ ಸಮ್ಮುಖದಲ್ಲಿ ವೈಜ್ಞಾನಿಕವಾಗಿ ಪಕ್ಷಿಗಳ ವೀಕ್ಷಣೆಗೆ ಕರೆದೊಯ್ಯಲಾಗುವುದು ಎಂದು ಪ್ರತಿಷ್ಠಾನದ ಸಂಸ್ಥಾಪಕ ಗೌತಮ್ ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ೯೧೬೪೧೩೧೬೩೬ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.