ಕೃಷಿ ಸಚಿವರ ಮಾಹಿತಿ

ಮಡಿಕೇರಿ, ಮಾ. ೧೫: ಕೊಡಗು ಜಿಲ್ಲೆಯಲ್ಲಿ ಭತ್ತದ ಕೃಷಿ ಪ್ರೋತ್ಸಾಹಿಸಲು ರೈತರಿಗೆ ಈ ಬಾರಿಯ ಆಯವ್ಯಯದಲ್ಲಿ ಯಾವುದೇ ವಿಶೇಷ ಪ್ಯಾಕೇಜ್ ಘೋಷಿಸಿರುವುದಿಲ್ಲ ಎಂದು ರಾಜ್ಯ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ತಿಳಿಸಿದ್ದಾರೆ. ವಿಧಾನ ಪರಿಷತ್‌ನಲ್ಲಿ ಸದಸ್ಯೆ ವೀಣಾ ಅಚ್ಚಯ್ಯ ಅವರ ಪ್ರಶ್ನೆಗೆ ಸಚಿವರು ಮಾಹಿತಿ ನೀಡಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಭತ್ತ ಬೆಳೆಯುತ್ತಿದ್ದ ಬಹುತೇಕ ಜಮೀನನ್ನು ರೈತರು ಭತ್ತ ಬೆಳೆಯದೆ ಪಾಳುಬಿಟ್ಟಿರುವುದು ಸರಕಾರದ ಗಮನಕ್ಕೆ ಬಂದಿದೆಯೇ...? ಬಂದಿದ್ದಲ್ಲಿ ಇದಕ್ಕೆ ಕಾರಣವಾದ ಅಂಶಗಳು ಹಾಗೂ ಕೃಷಿಯನ್ನು ಪ್ರೋತ್ಸಾಹಿಸಲು ಸರಕಾರ ಕೈಗೊಂಡಿರುವ ಕ್ರಮಗಳೇನು ಎಂದು ವೀಣಾ ಅಚ್ಚಯ್ಯ ಅವರು ಪ್ರಶ್ನಿಸಿದ್ದರು.

(ಮೊದಲ ಪುಟದಿಂದ)

ಇದಕ್ಕೆ ಉತ್ತರ ನೀಡಿರುವ ಸಚಿವರು ಇದು ಗಮನಕ್ಕೆ ಬಂದಿದೆ, ಕೊಡಗಿನಲ್ಲಿ ಭತ್ತ ಮುಂಗಾರು ಹಂಗಾಮಿನ ಪ್ರಮುಖ ಬೆಳೆಯಾಗಿದೆ. ಆದರೆ ನಿರೀಕ್ಷಿತ ಆದಾಯ, ಕೃಷಿ ಕಾರ್ಮಿಕರ ಕೊರತೆ, ಕಾಡುಪ್ರಾಣಿಗಳ ಹಾವಳಿ ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ಕೃಷಿ ಯಂತ್ರೋಪಕರಣಗಳ ಬಳಕೆ ಕಷ್ಟವಾಗುತ್ತಿರುವುದು ಕಂಡು ಬಂದಿರುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಕ್ರಮಗಳು

ಕೃಷಿ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ಆತ್ಮ ಯೋಜನೆ, ಕೃಷಿ ವಿಸ್ತೀರ್ಣ ಮತ್ತು ತರಬೇತಿ ಕಾರ್ಯಕ್ರಮಗಳಡಿಯಲ್ಲಿ ಭತ್ತದ ಬೆಳೆಯನ್ನು ಪ್ರೋತ್ಸಾಹಿಸುವ ಸಲುವಾಗಿ ರೈತರಿಗೆ ಹೆಚ್ಚು ಹೆಚ್ಚಾಗಿ ತರಬೇತಿ ಕಾರ್ಯಾಗಾರ, ಪ್ರಾತ್ಯಕ್ಷಿಕೆಗಳು ಮತ್ತು ಅಭಿಯಾನಗಳನ್ನು ಹಮ್ಮಿಕೊಳ್ಳಲಾಗಿರುತ್ತದೆ. ರೈತರಿಗೆ ಸಹಾಯಧನದಡಿಯಲ್ಲಿ ಕೃಷಿ ಪರಿಕರಗಳಾದ ಬಿತ್ತನೆ ಬೀಜ, ಸಸ್ಯ ಸಂರಕ್ಷಣಾ ಔಷಧಿಗಳು, ಸಸ್ಯ ಸಂರಕ್ಷಣಾ ಉಪಕರಣಗಳು, ಕೃಷಿ ಯಾಂತ್ರೀಕರಣ ಯೋಜನೆಯಡಿ ಭತ್ತದ ಬೆಳೆ ಉತ್ತೇಜನಕ್ಕಾಗಿ ರೈತರಿಗೆ ಸಹಾಯಧನದಲ್ಲಿ ಪವರ್ ಟಿಲ್ಲರ್, ರೋಟೋವೇಟರ್, ಡೀಸೆಲ್ ಪಂಪ್ ಸೆಟ್, ರೀಪರ್, ಸಣ್ಣ ಟ್ರಾö್ಯಕ್ಟರ್ ಮತ್ತು ಟಾರ್ಪಾಲ್‌ಗಳನ್ನು ವಿತರಣೆ ಮಾಡಲಾಗುತ್ತಿದೆ ಹಾಗೂ ಕೃಷಿ ಯಂತ್ರೋಪಕರಣಗಳ ಬಾಡಿಗೆ ಕೇಂದ್ರಗಳ ಮೂಲಕ ರೈತರಿಗೆ ಕಡಿಮೆ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ಆಧಾರದಲ್ಲಿ ನೀಡಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ. ಆದರೆ ಆಯವ್ಯಯದಲ್ಲಿ ಯಾವುದೇ ವಿಶೇಷ ಪ್ಯಾಕೇಜ್ ಘೋಷಿಸಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.