ಮಡಿಕೇರಿ, ಮಾ. ೧೬: ಕಾವೇರಿ ನದಿಗೆ ಖಾಸಗಿ ಹೊಟೇಲ್ ಒಂದು ಹೊಟೇಲಿನ ತ್ಯಾಜ್ಯ ನೀರನ್ನು ಹರಿಸುತ್ತಿದ್ದ ಕಾರಣ, ಕಲುಷಿತ ನೀರು ಸಮರ್ಪಕವಾಗಿ ಚರಂಡಿಗೆ ಹರಿಸುವ ತನಕ ಹೊಟೇಲ್‌ಅನ್ನು ತೆರೆಯದಂತೆ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೂಚಿಸಿದ್ದು, ತಾತ್ಕಾಲಿಕವಾಗಿ ಹೊಟೇಲ್ ಬಂದ್ ಮಾಡಿಸಿದ್ದಾರೆ.
ಕುಶಾಲನಗರ ಸರಕಾರಿ ಇಂಜಿನಿಯರಿAಗ್ ಕಾಲೇಜಿನ ಬಳಿ ಇರುವ ‘ಫಿಶ್ ಕರಿ ರೈಸ್’ ಹೊಟೇಲ್‌ನಿಂದ ತ್ಯಾಜ್ಯ ನೀರು ನೇರವಾಗಿ ಸಮೀಪದಲ್ಲಿರುವ ಕಾವೇರಿ ನದಿಗೆ ಸೇರುತ್ತಿರುವ ಕುರಿತು ತಾ. ೧೫ ರಂದು ‘ಶಕ್ತಿ’ ವರದಿ ಮಾಡಿದ್ದು, ಇದನ್ನು ಗಮನಿಸಿದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ಯಾಂ ತಮ್ಮಯ್ಯ, ಪಂಚಾಯಿತಿ ಸದಸ್ಯರಾದ ಶಿವಪ್ಪ ಹಾಗೂ ಪ್ರವೀಣ್ ಅವರುಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಹೊಟೇಲಿನಿಂದ ಉತ್ಪತ್ತಿಯಾಗುವ ತ್ಯಾಜ್ಯ ನೀರು ಸಮರ್ಪಕವಾಗಿ ನಿರ್ವಹಣೆಯಾಗುವವರೆಗೆ ಹೊಟೇಲ್‌ಅನ್ನು ತೆರೆಯದಂತೆ ಸೂಚಿಸಿದರು. ಈ ಸಂದರ್ಭ ಕರ್ನಾಟಕ ರಕ್ಷಣಾ ವೇದಿಕೆಯ ಅಣ್ಯಯ್ಯ, ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕ ಎಂ.ಎನ್ ಚಂದ್ರಮೋಹನ್, ಕೊಡಗನ ಹರ್ಷ, ಉದಯಕುಮಾರ್, ಕಾಂಗ್ರೆಸ್ ಪ್ರಮುಖ ವಿ.ಪಿ. ಶಶಿಧರ್ ಇದ್ದರು. ಇದೀಗ ತ್ಯಾಜ್ಯ ನೀರು ಚರಂಡಿ ಮೂಲಕ ಹರಿಯುವಂತೆ ಹೊಟೇಲಿನವರು ಕ್ರಮ ಕೈಗೊಂಡಿದ್ದಾರೆ. - ಟಿ.ಜಿ. ಸತೀಶ್