ಮಡಿಕೇರಿ, ಮಾ. ೧೪: ಕಡಗದಾಳು ಪಂಚಾಯಿತಿ ವ್ಯಾಪ್ತಿಯ ಕ್ಲೋಸ್ಬರ್ನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಿಸಿರುವ ಕೊಠಡಿ ಉದ್ಘಾಟನಾ ಸಮಾರಂಭ ಶನಿವಾರ ನೆರವೇರಿತು. ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ರೂ. ೨೧ ಲಕ್ಷ ವೆಚ್ಚದ ನೂತನ ಕೊಠಡಿಗಳನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಶಾಸಕ ರಂಜನ್, ಶೈಕ್ಷಣಿಕ ಅಭಿವೃದ್ಧಿ ನಿಟ್ಟಿನಲ್ಲಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ. ಕೊಡಗು ಜಿಲ್ಲೆಗೆ ಹೊಸದಾಗಿ ವಿಶ್ವವಿದ್ಯಾಲಯ ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ಬಜೆಟ್ನಲ್ಲಿ ಅನುದಾನ ವನ್ನೂ ಮೀಸಲಿಟ್ಟಿದೆ. ಶೈಕ್ಷಣಿಕವಾಗಿ ಕೊಡಗಿನ ಜನರಿಗೆ ಇದರಿಂದ ಬಹಳ ಅನುಕೂಲ ಆಗುತ್ತದೆ ಎಂದರು.
ಸರ್ಕಾರ ಮನೆಮನೆಗೆ ಎಲ್ಲಾ ಸವಲತ್ತುಗಳನ್ನು ತಲುಪಿಸುವ ಕಾರ್ಯಕ್ಕೆ ಮುಂದಾಗುತ್ತಿದೆ. ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿಯೂ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದು, ಪೋಷಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸಲು ಆಸಕ್ತಿ ತೋರಬೇಕೆಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ಮಾತನಾಡಿ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಿದರೆ ಮಾತ್ರ ಉತ್ತಮ ಶಿಕ್ಷಣ ಸಿಗುತ್ತದೆ ಎಂಬ ಮನಸ್ಥಿತಿಗೆ ಪೋಷಕರು ಬಂದಿದ್ದಾರೆ. ಸಮೂಹ ಸನ್ನಿಯಿಂದ ಪೋಷಕರು ಹೊರಬರಬೇಕು. ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲ. ಅವುಗಳು ಪೋಷಕರಿಗೆ ಅರ್ಥವಾಗಬೇಕೆಂದು ಅಭಿಪ್ರಾಯಪಟ್ಟರು.
ಕಡಗದಾಳು ಗ್ರಾ. ಪಂ. ಅಧ್ಯಕ್ಷ ಬಿ.ಟಿ. ಜಯಣ್ಣ ಮಾತನಾಡಿದರು.
ಶಾಲೆಗೆ ಸಭಾಂಗಣ ನಿರ್ಮಿಸಿ ಕೊಡುವಂತೆ ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಇದೇ ಸಂದರ್ಭ ಮನವಿ ಪತ್ರ ಸಲ್ಲಿಸಲಾಯಿತು. ಬಳಿಕ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ, ವಿದ್ಯಾರ್ಥಿ ಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಶಾಲೆಯ ಮುಖ್ಯ ಶಿಕ್ಷಕಿ ಸುಜಾತಾ ಪ್ರಾಸ್ತಾವಿಕ ಮಾತನಾಡಿದರು.
ಎಸ್ಡಿಎಂಸಿ ಅಧ್ಯಕ್ಷೆ ಶಾಹಿದಾ, ಗ್ರಾಪಂ ಉಪಾಧ್ಯಕ್ಷೆ ಪ್ರಭಾವತಿ, ಸದಸ್ಯೆ ಪುಷ್ಪಾವತಿ ರೈ, ಶಿಕ್ಷಣ ಇಲಾಖೆ ಕ್ಷೇತ್ರ ಸಮನ್ವಯಾಧಿಕಾರಿ ನಳಿನಿ, ಶಿಕ್ಷಣ ಸಂಯೋಜಕರಾದ ಮಾರುತಿ, ಹರೀಶ್, ಸಿಆರ್ಪಿ ವೀಣಾ, ಶಿಕ್ಷಕರಾದ ರಾಧಮ್ಮ, ಉಷಾ, ಜೆಸ್ಸಿ ಮುಂತಾದವರಿದ್ದರು. ಹಳೆ ವಿದ್ಯಾರ್ಥಿ ಸಂಘದ ಕಿಶೋರ್ ರೈ ಕತ್ತಲೆಕಾಡು ಕಾರ್ಯಕ್ರಮ ನಿರೂಪಿಸಿದರು.