ಮಡಿಕೇರಿ, ಮಾ. ೧೩: ಬಹುಜನ ಸಮಾಜ ಪಾರ್ಟಿ ವತಿಯಿಂದ ತಾ. ೧೭ ರಂದು ವಿಭಾಗೀಯ ಮಟ್ಟದ ಸಮಾವೇಶವನ್ನು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಜಿಲ್ಲಾ ಉಸ್ತುವಾರಿ ಜಯಪ್ಪ ಹಾನಗಲ್ ತಿಳಿಸಿದರು.

ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುಜನ ನಾಯಕ ಕಾನ್ಸಿರಾಮ್ ಅವರ ೮೮ನೇ ಜಯಂತಿಯ ಅಂಗವಾಗಿ ಭಾರತ ಸಂವಿಧಾನದ ಸಂರಕ್ಷಣೆಗಾಗಿ ಮತ್ತು ಬಹುಜನರ ಹಕ್ಕುಗಳ ಸುರಕ್ಷತೆಗಾಗಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ದೇಶದಲ್ಲಿ ಅಸ್ಪೃಶ್ಯತೆ, ಜಾತೀಯತೆ, ಲೈಂಗಿಕ ದೌರ್ಜನ್ಯ, ಲಿಂಗ ಬೇಧ, ಅನಾರೋಗ್ಯ, ಬಡತನ, ಅನಕ್ಷರತೆ, ಅಪೌಷ್ಟಿಕತೆ ತಾಂಡವವಾಡುತ್ತ್ತಿದ್ದು, ಎಲ್ಲಾ ಮೂಲಭೂತ ಹಕ್ಕುಗಳು ಮತ್ತು ಅಧಿಕಾರಗಳನ್ನು ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಗುವುದು ಎಂದರು.

ಅAದಿನ ಸಮಾವೇಶದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ, ರಾಜ್ಯ ಉಪಾಧ್ಯಕ್ಷ ಕೆ.ಬಿ. ವಾಸು, ಪ್ರಧಾನ ಕಾರ್ಯದರ್ಶಿ ಆರ್. ಮುನಿಯಪ್ಪ, ಸಂಯೋಜಕ ಮಾರಸಂದ್ರ ಮುನಿಯಪ್ಪ, ಎಂ. ಗೋಪಿನಾಥ್, ಸುರೇಂದ್ರ ಸಿಂಗ್ ಕಲೋರಿಯಾ, ದಿನೇಶ್ ಗೌತಮ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಸಿದ್ದಪ್ಪ, ಸಂಯೋಜಕರಾದ ಮಹಮ್ಮದ್, ಪ್ರಧಾನ ಕಾರ್ಯದರ್ಶಿ ಚೆನ್ನಬಸಪ್ಪ, ಮುಖಂಡ ಪೂವಣಿ, ಕೃಷ್ಣಪ್ಪ ಹಾಜರಿದ್ದರು.