ಮಡಿಕೇರಿ, ಮಾ. ೯: ಕೊಡಗು ಜಿಲ್ಲೆಯಲ್ಲಿ ರೈತರು - ಬೆಳೆಗಾರರಿಗೆ ಅನುಕೂಲವಾಗುವಂತೆ ೧೦ ಹೆಚ್.ಪಿ. ತನಕದ ಪಂಪ್ಸೆಟ್ಗೆ ವಿದ್ಯುತ್ ಇಲಾಖೆ - ಸರಕಾರ ಉಚಿತ ವಿದ್ಯುತ್ ನೀಡಬೇಕೆಂಬ ಬೇಡಿಕೆಗೆ ಯಾವದೇ ರೀತಿಯ ಸ್ಪಂದನ ದೊರೆಯುತ್ತಿಲ್ಲ. ಹಲವು ಸಮಯದ ಈ ಪ್ರಬಲ ಹಕ್ಕೊತ್ತಾಯ ಕೇವಲ ಬೇಡಿಕೆಯಾಗಿಯೇ ಉಳಿದಿದೆ ಹೊರತು ಇದರ ಬಗ್ಗೆ ಯಾರಿಂದಲೂ ಗಂಭೀರವಾದ ಚಿಂತನೆಯಾಗಲಿ, ಈ ಬೇಡಿಕೆಯಲ್ಲಿ ನ್ಯಾಯವಿದೆಯೇ ಎಂಬ ವಿಚಾರದತ್ತ ಚಿತ್ತ ಹರಿಯುತ್ತಿಲ್ಲ. ಪ್ರಸಕ್ತ ವರ್ಷದ ಬಜೆಟ್ನಲ್ಲಿ ಈ ಬಗ್ಗೆ ಘೋಷಣೆಯಾಗಲಿದೆ ಎಂಬ ನಿರೀಕ್ಷೆಯೂ ಇದೀಗ ಹುಸಿಯಾಗಿದೆ.
ಈ ವಿಚಾರಕ್ಕೆ ಸಂಬAಧಿಸಿದAತೆ ‘ಶಕ್ತಿ’ ಅವಲೋಕಿಸಿದಾಗ ಇದರಲ್ಲಿ ಸಂಬAಧಿಸಿದವರ ಇಚ್ಚಾಶಕ್ತಿಯ ಕೊರತೆಯೇ ಪ್ರಮುಖ ಕಾರಣ ಎಂಬದು ಅರಿವಾಗುತ್ತದೆ. ಅಲ್ಲದೆ ಈ ಕುರಿತ ಬೇಡಿಕೆಯ ವಾಸ್ತವತೆಯ ಕುರಿತು ಸರಕಾರ ಅಥವಾ ಇಲಾಖೆಯ ಮಟ್ಟಕ್ಕೆ ಸೂಕ್ತ ರೀತಿಯಲ್ಲಿ ಗಮನ ಸೆಳೆಯುವಲ್ಲಿಯೂ ವಿಫಲವಾಗಿರುವುದು ಕಂಡು ಬರುತ್ತದೆ. ಹಲವು ರೈತರು, ಬೆಳೆಗಾರರ ಸಂಘಟನೆಗಳು, ರೈತ ಸಂಘ ಹೋರಾಟ ನಡೆಸುತ್ತಲೇ ಬಂದಿವೆಯಾದರೂ ಮೇಲ್ಮಟ್ಟದಲ್ಲಿ ಸಂಬAಧಿಸಿದವರು ಇದರತ್ತ ಗಂಭೀರವಾಗಿ ಗಮನ ಹರಿಸುತ್ತಿಲ್ಲ. ಬೇರೆ ಜಿಲ್ಲೆಗಳಿಗೂ ಕೊಡಗು ಜಿಲ್ಲೆಗೂ ಇರುವ ವ್ಯತ್ಯಾಸದ ಬಗ್ಗೆ ಮೊದಲು ಅರಿಯಬೇಕಾಗಿದೆ ಎಂಬದು ವಾಸ್ತವತೆಯಾಗಿದೆ. ಆದರೆ ಬೇರೆ ಸಂಘಟನೆಗಳ ಹೋರಾಟ, ಇದರಿಂದ ಯಾರಿಗೆ ಲಾಭ - ನಷ್ಟ ಎಂಬಕಾರಣವೊ, ರಾಜಕೀಯವಾಗಿ ತುಳಿತವೊ ಬೇಡಿಕೆಯಂತೂ ಈಡೇರುತ್ತಿಲ್ಲ.
ವಿಚಾರವೇನಿದೆ...?
ವಿದ್ಯುತ್ ಇಲಾಖೆಯ ಮೂಲಕ ಪ್ರಸ್ತುತ ದರ ನಿಗದಿಗೆ ಸಂಬAಧಿಸಿದAತೆ ಕೆಲವು ಮಾರ್ಗಸೂಚಿಗಳಿವೆ. ಇವು ಇಡೀ ರಾಜ್ಯಕ್ಕೆ ಒಂದೇ ತರವಾಗಿ ಅನ್ವಯವಾಗುವಂತದ್ದು. ಐ.ಪಿ. ಸೆಟ್ ವಿಚಾರದಲ್ಲಿ ಮೂರು ವಿಭಾಗಗಳು ಬರುತ್ತವೆ. ಇದರಲ್ಲಿ ಲೋಟೆನ್ಷನ್ (ಐಖಿ) ಹೈಟೆನ್ಷನ್ (ಊಖಿ) ಯಂತಹ ವಿಭಾಗಗಳಿವೆ. ಲೋಟೆನ್ಷನ್ (ಐಖಿ) ಯಲ್ಲಿ ಐಖಿ ೨- ಅಂದರೆ ಮನೆಬಳಕೆ, ಐಖಿ ೩- ಕಮರ್ಷಿಯಲ್ (ವಾಣಿಜ್ಯಬಳಕೆ) ಹಾಗೂ ಐಖಿ ೪- ನೀರಾವರಿಗೆ ಸಂಬAಧಿಸಿದ್ದಾಗಿದೆ. ಐಖಿ ೪- ರಲ್ಲಿ ಎ.ಬಿ.ಸಿ. ಎಂಬ ಮೂರು ವಿಭಾಗಗಳು ಬರುತ್ತವೆ. ಎ ವಿಭಾಗದಲ್ಲಿ ಸ್ಪಿಂಕ್ಲರ್, ೧೦ ಊ.P ತನಕ ಉಚಿತವಾಗಿಯೇ ಇದೆ ಆದರೆ ಇದರಲ್ಲಿ ಬರುವದು, ಗದ್ದೆಕೃಷಿ, ತೆಂಗು, ಅಡಿಕೆ ಬೆಳೆ ಇತ್ಯಾದಿ.
ಬಿ. ವಿಭಾಗದಲ್ಲಿ ನರ್ಸರಿ, ಹುಲ್ಲುಗಾವಲು, ಸರಕಾರಿ ಉದ್ಯಾನವನ, ಅರಣ್ಯ ನರ್ಸರಿ ಇತ್ಯಾದಿಗಳು ಬರಲಿದ್ದು ಇದಕ್ಕೂ ವಿದ್ಯುತ್ ಉಚಿತವಾಗಿದೆ.
ಪ್ರಶ್ನೆಯಿರುವದೇ ಇಲ್ಲಿ
ಐಖಿ ೪ ರ ಸಿ ವಿಭಾಗದಲ್ಲಿ ಕಾಫಿ, ಟೀ, ರಬ್ಬರ್ ಖಾಸಗಿ ನರ್ಸರಿಗಳಂತಹ ಬೆಳೆಗಳನ್ನು ಸೇರಿಸಲಾಗಿದೆ. ಆದರೆ ಇದಕ್ಕೆ ವಿದ್ಯುತ್ ಉಚಿತವಾಗಿಲ್ಲ. ರೈತರು - ಬೆಳೆಗಾರರು ಇದರ ನಿಗದಿತ ದರವನ್ನು ಪಾವತಿಸಲೇಬೇಕಾಗಿದೆ. ಇದು ಪ್ರಸ್ತುತ ಎಲ್ಲಾ ಜಿಲ್ಲೆಗಳಲ್ಲೂ ಒಂದೇ ರೀತಿಯಿದೆ. ಉಚಿತ ವಿದ್ಯುತ್ನ ಪಟ್ಟಿಯಲ್ಲಿ ತಂಬಾಕು ಬೆಳೆ, ಕಬ್ಬು ಬೆಳೆಯಂತಹ ಕೃಷಿಗಳು ಸೇರಿವೆ. ಆದರೆ ಕಾಫಿ, ಉಚಿತ ವಿದ್ಯುತ್ ಪಟ್ಟಿಯಲ್ಲಿಲ್ಲ.
ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ಬಹುತೇಕ ಮಾರ್ಚ್ - ಏಪ್ರಿಲ್ ತಿಂಗಳಿನಲ್ಲಿ ಮಾತ್ರ ಅದರಲ್ಲೂ ಕೆಲವು ದಿನಗಳಲ್ಲಿ ಮಾತ್ರ ಬೆಳೆಗಾರರು ನೀರಾವರಿಗೆ ಪಂಪ್ಸೆಟ್ ಅನ್ನು ಅವಲಂಬಿಸುತ್ತಾರೆ. ನಂತರ ಇಡೀ ವರ್ಷದಲ್ಲಿ ಮತ್ತೆ ಇದು ಬಳಸಲ್ಪಡುವದು ಬಹುತೇಕವಾಗಿ ಇರುವುದಿಲ್ಲ. ಐಖಿ ಎ ನಿಯಮದಂತೆ ಕೃಷಿ ಕೆಲಸ ಕಾರ್ಯಕ್ಕೆ ಉಚಿತ ವಿದ್ಯುತ್ ಇದೆಯಾದರೂ ಕೊಡಗಿನಲ್ಲಿ ಭತ್ತ ಮತ್ತಿತರ ಕೆಲ ಕೃಷಿ ಕೆಲಸ ನಡೆಯುವುದು ಕೇವಲ ಮಳೆಗಾಲದ ಅವಧಿಯಲ್ಲಿ ಮಾತ್ರ ಎಂಬದು ವಾಸ್ತವವಾಗಿದೆ.
ಇದಕ್ಕೆ ಉಚಿತ ವಿದ್ಯುತ್ ಸೌಲಭ್ಯ ಇದ್ದರೂ ಬಹುತೇಕ ಬಳಕೆಯಾಗದು. ಇಲ್ಲಿ ಬೇಕಾಗಿರುವುದು ಮುಖ್ಯವಾಗಿ ಕಾಫಿ ತೋಟಗಳಿಗೆ ನೀರು ಹಾಯಿಸುವ ಸಂದರ್ಭದಲ್ಲಿ ಮಾತ್ರ. ಅದೂ ಕೆಲದಿನಗಳ ಮಟ್ಟಿಗೆಯಷ್ಟೆ. ರಾಜ್ಯದ ಇತರ ಜಿಲ್ಲೆಗಳಲ್ಲಿ ವಿವಿಧ ಕೃಷಿಗಳನ್ನು ವರ್ಷವಿಡೀ ಬೆಳೆಯಲಾಗುತ್ತಿದ್ದು, ಇದಕ್ಕೆ ನಿರಂತರವಾಗಿ ನೀರಾವರಿ ಬಳಕೆಯಾಗುತ್ತದೆ. ತಂಬಾಕು, ಕಬ್ಬುಬೆಳೆಗಳಿಗೂ ಹಲವಾರು ತಿಂಗಳು ನೀರು ಬೇಕಿದ್ದು, ವಿದ್ಯುತ್ ಬಳಸಲ್ಪಡುತ್ತದೆ. ಈ ವ್ಯತ್ಯಾಸಗಳನ್ನು ಸರಕಾರ - ವಿದ್ಯುತ್ ಇಲಾಖೆ ಅರಿಯಬೇಕಾಗಿದೆ.
ಮತ್ತೊಂದು ವಿಚಾರ
ಕೊಡಗಿನಲ್ಲಿ ಮಾರ್ಚ್ - ಏಪ್ರಿಲ್ ತಿಂಗಳಿನಲ್ಲಿ ಐ.ಪಿ ಸೆಟ್ ಬಳಕೆಯಾದರೂ ಬೆಳೆಗಾರರಿಗೆ ಆಗಾಗ್ಗೆ ವಿದ್ಯುತ್ನ ಸಮಸ್ಯೆ ಎದುರಾಗುತ್ತಿರುವುದು ಸಾಮಾನ್ಯವಾಗಿದೆ. ಪದೇ ಪದೇ ವಿದ್ಯುತ್ ಪೂರೈಕೆ ಕೈಕೊಡುತ್ತದೆ. ಆದರೆ ಇದರ ನಡುವೆ ಕೊಡಗಿನ ಮಾದರಿಯಲ್ಲೇ ಹೆಚ್ಚು ಕಾಫಿ ಬೆಳೆಯುವ ಪ್ರದೇಶವಾದ ಚಿಕ್ಕಮಗಳೂರು ಜಿಲ್ಲೆಗೆ ಕಳೆದ ಕೆಲಸಮಯದ ಹಿಂದೆ ಕಾಫಿ ಬೆಳೆಗಾರರು ಹಾಗೂ ಇತರೆ ರೈತ ವರ್ಗಕ್ಕೆ ಪ್ರತಿದಿನ ೧೨ ಗಂಟೆಗಳ ಕಾಲ ೩ಫೇಸ್ ವಿದ್ಯುತ್ ನಿರಂತರ ಪೂರೈಕೆಗೆ ಆದೇಶ ಮಾಡಲಾಗಿದೆ. ಇಂಧನ ಸಚಿವ ಸುನಿಲ್ ಕುಮಾರ್, ಶಾಸಕ ಹಾಗೂ ಮಾಜಿ ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಮತ್ತಿತರ ಪ್ರಯತ್ನ - ಸೂಚನೆಯಂತೆ ಅಲ್ಲಿಗೆ ಈ ವ್ಯವಸ್ಥೆಗೆ ಆದೇಶವಾಗಿದೆ. ಆದರೆ ಕೊಡಗಿಗೆ ಕೆಲವು ದಿನಗಳ ಬಳಕೆಗೆ ಸಮಸ್ಯೆ ಎಂದಿನAತೆ ಮುಂದುವರಿದಿದೆ.
ದರ ಪಾವತಿ ಕಡ್ಡಾಯ
ಪ್ರಸ್ತುತ ೧೦ ಹೆಚ್.ಪಿ ಪಂಪ್ಸೆಟ್ ಹೊಂದಿರುವ ಜಿಲ್ಲೆಯ ರೈತರು ಪ್ರತಿ ತಿಂಗಳಿಗೆ ಕನಿಷ್ಟ ದರ ರೂ. ೮೦೦ (ಪ್ರತಿ ಹೆಚ್.ಪಿ.ಗೆ ಪ್ರತಿತಿಂಗಳಿಗೆ ರೂ.೮೦) ರಂತೆ ಇಡೀ ವರ್ಷದ ವಿದ್ಯುತ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಬಳಸಿದರೂ, ಬಳಸದಿದ್ದರೂ ಇಡೀ ವರ್ಷದ ಬಿಲ್ ಕಟ್ಟಬೇಕಾಗಿರುವುದು ಬೆಳೆಗಾರರಿಗೆ ನಿಜಕ್ಕೂ ಹೊರೆಯಾಗಲಿದೆ.
ವಾಸ್ತವತೆಯನ್ನು ಅರಿಯಬೇಕಿದೆ
ರಾಜ್ಯದ ಬೇರೆ - ಬೇರೆ ಜಿಲ್ಲೆಗಳಿಗೂ, ಕೊಡಗಿನ ವಿಚಾರಕ್ಕೂ ಇರುವ ವಾಸ್ತವವನ್ನು ಅರಿತು ಇಲ್ಲಿನ ಬೆಳೆಗಾರರಿಗೆ ಉಚಿತ ವಿದ್ಯುತ್ ನೀಡಬೇಕೆಂಬ ಬೇಡಿಕೆ ಬಹುಶಃ ನ್ಯಾಯೋಚಿತವಾಗಿಯೇ ಇದೆ. ಉದಾಹರಣೆಗೆ ಇತರೆಡೆ ವರ್ಷಕ್ಕೆ ೩ ಭತ್ತದ ಫಸಲನ್ನು ಬೆಳೆಯಲಾಗುತ್ತಿದ್ದು, ಇದರ ನೀರಾವರಿಗೆ ವಿದ್ಯುತ್ ಉಚಿತವಿದೆ. ಆದರೆ ಕೊಡಗಿನಲ್ಲಿ ಎರಡು ತಿಂಗಳ ಅವಧಿಯಲ್ಲಿ ಅದರಲ್ಲೂ ಕೆಲದಿನಗಳ ಬಳಕೆಗೆ ವರ್ಷಪೂರ್ತಿ ದರ ಪಾವತಿ ಮಾಡುವದರಲ್ಲಿ ನ್ಯಾಯವಿದೆಯೇ ಎಂಬ ಪ್ರಶ್ನೆ ಇಲ್ಲಿನವರದ್ದು.
ಈ ಬಗ್ಗೆ ಜಿಲ್ಲೆಯ ಶಾಸಕರುಗಳು, ಜನಪ್ರತಿನಿಧಿಗಳು, ಬೆಳೆಗಾರರ ಸಂಘಟನೆಗಳು, ರೈತ ಸಂಘ ತಮ್ಮ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಗ್ಗಟ್ಟಿನ ಪ್ರಯತ್ನ ನಡೆಸಬೇಕಾಗಿದೆ. ಹೀಗಾದಲ್ಲಿ ಮಾತ್ರ ಈ ಬೇಡಿಕೆ ಈಡೇರಬಹುದೇನೋ...?