*ಸಿದ್ದಾಪುರ, ಮಾ. ೧೦: ಪೈಸಾರಿ ಜಾಗಕ್ಕೆ ಬೇಲಿ ನಿರ್ಮಿಸಿ ಗ್ರಾಮಸ್ಥರ ಸಂಚಾರಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ಆರೋಪಿಸಿ ಮಹಿಳೆಯರೇ ಬೇಲಿಯನ್ನು ಕಿತ್ತೆಸೆದ ಪ್ರಕರಣ ಅಭ್ಯತ್ ಮಂಗಲದಲ್ಲಿ ನಡೆದಿದೆ.
ಗ್ರಾಮದ ಹಳೇ ಅಂಗನವಾಡಿ ಕಟ್ಟಡದ ಬಳಿ ಖಾಸಗಿ ವ್ಯಕ್ತಿಯೊಬ್ಬರು ಬೇಲಿ ನಿರ್ಮಿಸಿರುವುದರಿಂದ ಬಟ್ಟೆ ಒಗೆಯಲು ತೋಡಿಗೆ ಹೋಗಲು ಇದ್ದ ಮಾರ್ಗ ಬಂದ್ ಆಗಿದೆ ಎಂದು ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದರು.
ಇದು ಸರ್ಕಾರಕ್ಕೆ ಸೇರಿದ ಪೈಸಾರಿ ಜಾಗವಾಗಿರುವುದರಿಂದ ಕಂದಾಯ ಇಲಾಖೆ ತಕ್ಷಣ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ಚೆಟ್ಟಳ್ಳಿ ಉಪಠಾಣೆಗೆ ದೂರು ನೀಡಿದ ಗ್ರಾ.ಪಂ. ಅಧ್ಯಕ್ಷೆ ಅನಿತಾ, ಉಪಾಧ್ಯಕ್ಷೆ ಸುಧಾ ಮತ್ತಿತರರು ಗ್ರಾಮದ ಮಹಿಳೆಯರ ನೆರವಿನೊಂದಿಗೆ ಬೇಲಿಯನ್ನು ತೆರವುಗೊಳಿಸಿದರು.
ಎಎಸ್ಐ ಶ್ರೀನಿವಾಸ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಲೋಕೇಶ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.