ಸೋಮವಾರಪೇಟೆ, ಮಾ. ೧೦: ಇಲ್ಲಿನ ಹಿಂದೂಸ್ಥಾನ್ ಫುಟ್ಬಾಲ್ ಕ್ಲಬ್ ವತಿಯಿಂದ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿರುವ ಜಿಲ್ಲಾಮಟ್ಟದ ಫುಟ್ಬಾಲ್ ಪಂದ್ಯಾಟಕ್ಕೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕ್ರೀಡೆಗಳು ದೈಹಿಕ ಹಾಗೂ ಮಾನಸಿಕ ಕ್ಷಮತೆಯನ್ನು ಹೆಚ್ಚಿಸಲು ಪೂರಕವಾಗಿದ್ದು, ಆಸಕ್ತಿ ಹಾಗೂ ನಿರಂತರ ಅಭ್ಯಾಸದಿಂದ ಮಾತ್ರ ಸಾಧನೆ ಮಾಡಬಹುದು ಎಂದರು.
ಪAದ್ಯಾಟಗಳಲ್ಲಿ ಸೋಲು ಗೆಲುವು ಸಾಮಾನ್ಯ. ಆದರೆ ಭಾಗವಹಿಸುವಿಕೆ ಮುಖ್ಯ. ಸ್ಪರ್ಧಾ ಮನೋಭಾವದಿಂದ ಕ್ರೀಡೆಯಲ್ಲಿ ಭಾಗವಹಿಸಬೇಕು. ಕ್ರೀಡಾಪಟುಗಳು ಸತತ ಪರಿಶ್ರಮದತ್ತ ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.
ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ ಮಾತನಾಡಿ, ಕೊರೊನಾ ಹಿನ್ನೆಲೆ ಸ್ಥಗಿತಗೊಂಡಿದ್ದ ಕ್ರೀಡಾಕೂಟಗಳು ಮತ್ತೆ ಆರಂಭಗೊಳ್ಳುತ್ತಿದ್ದು, ಕ್ರೀಡಾಪಟುಗಳಲ್ಲಿ ಉತ್ಸಾಹ ಮೂಡಿಸಿದೆ ಎಂದರು. ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ಚಂದ್ರಶೇಖರ್, ಗುತ್ತಿಗೆದಾರ ಜಗದೀಶ್, ಹಿಂದೂಸ್ಥಾನ್ ಫುಟ್ಬಾಲ್ ಕ್ಲಬ್ ಅಧ್ಯಕ್ಷ ಬಿ.ಆರ್. ಮಹೇಶ್ ಅವರುಗಳು ಉಪಸ್ಥಿತರಿದ್ದರು.
ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ ಒಟ್ಟು ೧೨ ತಂಡಗಳು ಭಾಗಿಯಾಗಿದ್ದು, ವಿಜೇತ ತಂಡಗಳಿಗೆ ಪಾರಿತೋಷಕದೊಂದಿಗೆ ನಗದು ಬಹುಮಾನ ನೀಡಲಾಗುವುದು. ಇದರೊಂದಿಗೆ ವೈಯುಕ್ತಿಕ ಬಹುಮಾನ ನೀಡಲಾಗುವುದು. ತಾ. ೬ರಂದು (ಇಂದು) ಫುಟ್ಬಾಲ್‌ನ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಾಟಗಳು ನಡೆಯಲಿವೆ. ಬೆಳಿಗ್ಗೆ ಸಾರ್ವಜನಿಕ ವಿಭಾಗದಲ್ಲಿ ಮ್ಯಾರಥಾನ್ ಆಯೋಜಿಸಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ಕ್ರೀಡಾಕೂಟದ ಆಯೋಜಕರಾದ ಆಶಿತ್, ಶಶಾಂಕ್, ಕೌಶಿಕ್, ರಕ್ಷಿತ್, ರೋಹನ್ ತಿಳಿಸಿದ್ದಾರೆ.