ಸೋಮವಾರಪೇಟೆ, ಮಾ. ೧೦: ಕ್ರೀಡಾಕೂಟಗಳು ಪರಸ್ಪರ ಬಾಂಧವ್ಯ-ಸಾಮರಸ್ಯ ವೃದ್ಧಿಸಲು ಸಹಕಾರಿಯಾಗಿದ್ದು, ಸ್ಪರ್ಧಾ ಮನೋಭಾವದಿಂದ ಕ್ರೀಡಾಪಟುಗಳು ಭಾಗಿಯಾಗಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ ಅಭಿಪ್ರಾಯಿಸಿದರು.
ಇಲ್ಲಿನ ಇಂದಿರಾಗಾAಧಿ ಅಭಿಮಾನಿಗಳ ಸಂಘದ ವತಿಯಿಂದ ಪಟ್ಟಣದ ಸಾಕಮ್ಮನ ಬಂಗಲೆ ಮೈದಾನದಲ್ಲಿ ಆಯೋಜಿಸಿದ್ದ ೩೫ನೇ ವರ್ಷದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿಯೇ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳತ್ತ ಆಸಕ್ತಿ ವಹಿಸಬೇಕು. ಕ್ರೀಡಾ ಕ್ಷೇತ್ರದಲ್ಲೂ ಉತ್ತಮ ಭವಿಷ್ಯವಿದ್ದು, ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸರ್ಕಾರಗಳೂ ಸಹ ಕ್ರೀಡಾಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್ ಮಾತನಾಡಿ, ಇಂದಿರಾಗಾAಧಿ ಅಭಿಮಾನಿಗಳ ಸಂಘದ ವತಿಯಿಂದ ಕಳೆದ ೩೫ ವರ್ಷಗಳಿಂದಲೂ ಸತತವಾಗಿ ಕಬಡ್ಡಿ ಪಂದ್ಯಾಟ ಆಯೋಜಿಸುತ್ತಾ, ದೇಸೀಯ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.
ಪAದ್ಯಾಟಕ್ಕೆ ಚಾಲನೆ ನೀಡಿದ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್ ಮಾತನಾಡಿ, ಕಬಡ್ಡಿ ಕ್ರೀಡೆಯು ಇತ್ತೀಚಿನ ದಿನಗಳಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದು, ಪ್ರೋ ಕಬಡ್ಡಿಯ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ. ಸ್ಥಳೀಯ ಆಟಗಾರರಿಗೆ ಹೆಚ್ಚಿನ ಪ್ರೋತ್ಸಾಹ ದೊರೆತರೆ ಭವಿಷ್ಯದಲ್ಲಿ ಉತ್ತಮ ಆಟಗಾರರಾಗಿ ರೂಪುಗೊಳ್ಳಲು ಸಾಧ್ಯ ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಗತಿಪರ ಜನಾಂದೋಲನ ವೇದಿಕೆಯ ನಿರ್ವಾಣಪ್ಪ, ಬ್ಲಾಕ್ ಕಾಂಗ್ರೆಸ್ ಮುಖಂಡ ವಿ.ಎ. ಲಾರೆನ್ಸ್, ನಿವೃತ್ತ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಹಾಲೇಬೇಲೂರು ನಿರ್ವಾಣಿ ಶೆಟ್ಟಿ, ಪ್ರಮುಖರಾದ ಇಸಾಕ್, ಸುಲೈಮಾನ್, ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು, ಕಾರ್ಯದರ್ಶಿ ರಾಜಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.