ಸಿದ್ದಾಪುರ, ಮಾ. ೯ : ೨೦೧೮-೧೯ ರಲ್ಲಿ ಸಂಭವಿಸಿದ ಪ್ರಳಯದಲ್ಲಿ ನಿರಾಶ್ರಿತರಾದವರಿಗೆ ಸೂರು ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ವಶಪಡಿಸಿಕೊಂಡ ಜಾಗದಲ್ಲಿ ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ನಿರಾಶ್ರಿತರ ಹೋರಾಟ ಸಮಿತಿಯ ನೇತೃತ್ವದಲ್ಲಿ ನಿರಾಶ್ರಿತರೊಂದಿಗೆ ಗುಡಿಸಲು ಚಳವಳಿ ನಡೆಸಲು ತೀರ್ಮಾನಿಸಲಾಗಿತ್ತು. ಇದಕ್ಕೆ ಜಿಲ್ಲಾಧಿಕಾರಿ ಸ್ಪಂದಿಸಿದ್ದು, ಸ್ಥಳಕ್ಕೆ ತೆರಳಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ ಹಿನ್ನೆಲೆಯಲ್ಲಿ ಇಂದು ವಾಲ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಶಪಡಿಸಿಕೊಂಡ ಜಾಗಕ್ಕೆ ಉಪವಿಭಾಗಾಧಿಕಾರಿ ಯತೀಶ್ ಉಳ್ಳಾಳ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಜಿಲ್ಲಾಧಿಕಾರಿಯವರ ಆದೇಶದ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ್ದೇವೆ. ಸ್ಥಳದಲ್ಲಿ ಪರಿಶೀಲಿಸಿ ವರದಿ ನೀಡುವಂತೆ ಆದೇಶಿಸಿದ್ದಾರೆ. ತೋಡು ಹರಿಯುತ್ತಿದ್ದು, ಜಾಗಕ್ಕೆ ತೆರಳಲು ಸೇತುವೆಯ ಅವಶ್ಯಕತೆ ಇರುವುದು ಕಂಡುಬAದಿದೆ. ಈಗಾಗಲೇ ಸೇತುವೆ ಕಾಮಗಾರಿಗೆ ಸಂಬAಧಿಸಿದ ಖರ್ಚು, ವೆಚ್ಚಗಳ ವರದಿಗಳು ತಯಾರಾಗಿವೆ ಎಂಬುದು ಗಮನಕ್ಕೆ ಬಂದಿದೆ. ಇಲ್ಲಿ ಸೇತುವೆಯ ಅವಶ್ಯಕತೆ ಇಲ್ಲದಿದ್ದಲ್ಲಿ ಕಾಮಗಾರಿ ಪ್ರಾರಂಭ ಮಾಡಬಹುದಾಗಿತ್ತು. ಹೋರಾಟಗಾರರ ಮನವೊಲಿಸಲು ಸಾಧ್ಯವಾದಷ್ಟು ಪ್ರಯತ್ನ ಪಟ್ಟಿದ್ದೇವೆ, ಹಾಗೆ ಕಾಲಾವಕಾಶವನ್ನು ಕೇಳಿದ್ದೇವೆ. ಸ್ಥಳದ ಬಗೆ ವರದಿಯನ್ನು ಇಂದು ಜಿಲ್ಲಾಧಿಕಾರಿಯವರಿಗೆ ತಲುಪಿಸಿದ ನಂತರ ಜಿಲ್ಲಾಧಿಕಾರಿ ಯವರ ಮಾರ್ಗದರ್ಶನದಂತೆ ಸೂಕ್ತ ಕ್ರಮಕೈಗೊಳ್ಳಲಾಗುವುದೆಂದರು.
ನಿರಾಶ್ರಿತರ ಹೋರಾಟ ಸಮಿತಿ ಅಧ್ಯಕ್ಷ ಭರತ್ ಮಾತನಾಡಿ, ತಾ. ೧೦ರಂದು (ಇಂದು) ಜಿಲ್ಲಾಧಿಕಾರಿ ಕಚೇರಿ ಎದುರು ಗುಡಿಸಲು ಚಳವಳಿ ನಡೆಸಲು ತೀರ್ಮಾನಿಸಿದ್ದೇವು. ಜಿಲ್ಲಾಧಿಕಾರಿಯವರ ಆದೇಶದಂತೆ ಇಂದು ಸ್ಥಳಕ್ಕೆ ಉಪವಿಭಾಗಾಧಿಕಾರಿ ಗಳು ಭೇಟಿ ನೀಡಿ ಇಲ್ಲಿನ ವಾಸ್ತವತೆಯನ್ನು ಅರಿತಿದ್ದಾರೆ. ಅಲ್ಲದೆ ನಾಲ್ಕು ಐದು ದಿನ ಕಾಲಾವಕಾಶ ಕೊಡುವಂತೆ ಕೇಳಿಕೊಂಡಿದ್ದಾರೆ. ಇಂದು ಸಂಜೆ ಹೋರಾಟ ಸಮಿತಿಯ ಸಭೆಯ ಬಳಿಕ ಹೋರಾಟದ ಕುರಿತು ತೀರ್ಮಾನ ಕೈಗೊಳ್ಳುತ್ತೇವೆ. ಜಿಲ್ಲಾಡಳಿತ ಮತ್ತೊಮ್ಮೆ ನಿರಾಶ್ರಿತರನ್ನು ಕಡೆಗಣಿಸಿದರೆ ನಮ್ಮ ಹೋರಾಟ ಬದಲಾಗುವುದಿಲ್ಲ ಎಂದರು.
ಕುಶಾಲನಗರ ತಾಲೂಕು ತಹಶೀಲ್ದಾರ್ ಪ್ರಕಾಶ್, ಗ್ರಾಮಲೆಕ್ಕಿಗ ಸಚಿನ್, ನೆಲ್ಲಿಹುದಿಕೇರಿ ಗ್ರಾ.ಪಂ. ಪಿಡಿಓ ಅನಿಲ್ ಕುಮಾರ್, ವಾಲ್ನೂರು ಗ್ರಾ.ಪಂ. ಪಿಡಿಓ ಲೋಕೇಶ್, ವಾಲ್ನೂರು ಗ್ರಾ.ಪಂ. ಅಧ್ಯಕ್ಷೆ ಅನಿತಾ, ಉಪಾಧ್ಯಕ್ಷೆ ಸುದಾ, ನೆಲ್ಲಿಹುದಿಕೇರಿ ಗ್ರಾ.ಪಂ. ಸದಸ್ಯರಾದ ಸಫಿಯಾ, ಸುಜಾತ ಹಾಜರಿದ್ದರು.