ಚೆಯ್ಯAಡಾಣೆ, ಮಾ. ೯: ಹುತಾತ್ಮ ಯೋಧ ಅಲ್ತಾಫ್ ಅಹ್ಮದ್ ಕುಟುಂಬವನ್ನು ಭೇಟಿ ಮಾಡಿದ ಸಂಸದ ಪ್ರತಾಪ್ ಸಿಂಹ ಅವರು ಕುಟುಂಬದವರಿಗೆ ಧನಸಹಾಯ ನೀಡಿದರು.

ಎಡಪಾಲದಲ್ಲಿ ವಾಸವಿರುವ ಹುತಾತ್ಮ ಯೋಧನ ಕುಟುಂಬವನ್ನು ಭೇಟಿ ಮಾಡಿ ಪತ್ನಿ ಮಕ್ಕಳು ಹಾಗೂ ಪೋಷಕರಿಗೆ ಹಾಗೂ ಕುಟುಂಬಸ್ಥರಿಗೆ ಸಾಂತ್ವನದ ನುಡಿಗಳನ್ನಾಡಿದರು. ಕುಟುಂಬಕ್ಕೆ ರೂ. ೫೦,೦೦೦ ವೈಯಕ್ತಿಕ ಧನ ಸಹಾಯ ಮಾಡಿದರು.

ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ; ವೀರ ಮರಣ ಹೊಂದಿದ ಅಲ್ತಾಫ್ ಅಹ್ಮದ್ ಅವರ ಪಾರ್ಥಿವ ಶರೀರ ಕೊಡಗಿಗೆ ಬಂದ ಸಂದರ್ಭ ತಾನು ಕೊಡಗಿಗೆ ಬರಬೇಕಿತ್ತು. ಆದರೆ ಕಾರ್ಯನಿಮಿತ್ತ ಬೇರೆಡೆ ತೆರಳಿದ್ದರಿಂದ ಪಾರ್ಥಿವ ಶರೀರದ ದರ್ಶನ ಸಾಧ್ಯವಾಗಲಿಲ್ಲ. ಯೋಧನ ಕುಟುಂಬಕ್ಕೆ ಸ್ವಂತ ಮನೆಯಿಲ್ಲ. ಬಾಡಿಗೆ ಮನೆಯಲ್ಲಿ ವಾಸ್ತವ್ಯಹೂಡಿದ್ದಾರೆ. ಕುಟುಂಬಕ್ಕೆ ಸರಕಾರದಿಂದ ಭೂಮಿ ಮಂಜೂರು ಮಾಡಿಸಬೇಕಾಗಿದ್ದು, ತನ್ನ ಕರ್ತವ್ಯವಾಗಿದೆ. ಶಾಸಕ ಬೋಪಯ್ಯ ಅವರೊಂದಿಗೆ ಸಮಾಲೋಚಿಸಿ ಸರಕಾರಿ ಭೂಮಿಯನ್ನು ಮಂಜೂರು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದರು. ಯೋಧನ ಕುಟುಂಬದ ಕಷ್ಟಸುಖಗಳಲ್ಲಿ ಭಾರತೀಯ ಜನತಾ ಪಾರ್ಟಿ ಹಾಗೂ ನಮ್ಮ ಸರಕಾರ ಇರುತ್ತದೆ ಎಂದು ಧೈರ್ಯ ತುಂಬಿದರು. ಸ್ಥಳದಿಂದಲೇ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ, ಮನೆ ಒದಗಿಸಿಕೊಡುವಂತೆ ಸೂಚಿಸಿದರು.

ಈ ಸಂದರ್ಭ ಮಡಿಕೇರಿ ತಾಲೂಕು ಘಟಕದ ಬಿಜೆಪಿ ಅಧ್ಯಕ್ಷ ಕಾಂಗೀರ ಸತೀಶ್, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೋಡಿರ ಪ್ರಸನ್ನ ತಮ್ಮಯ್ಯ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಪವನ್ ತೋಟಂಬೈಲು, ಚೆಯ್ಯಂಡಾಣೆ ಶಕ್ತಿ ಕೇಂದ್ರದ ಅಧ್ಯಕ್ಷ ಪೊಕ್ಕುಳಂಡ್ರ ದನೋಜ್, ಮಂಞಪುರ ಚಾಯಪ್ರಕಾಶ್, ನೆರಪಂಡ ಸತೀಶ್, ಅನ್ನಂಬೀರ ಗಿರೀಶ್, ಲೋಕೇಶ್ ಗ್ರಾಮಸ್ಥರಾದ ಜಾಬಿರ್, ಕುಂಞಹ್ಮದ್ ಯೋಧನ ಕುಟುಂಬದ ಸದಸ್ಯರು ಸಂಸದರ ಆಗಮನದ ವೇಳೆ ಉಪಸ್ಥಿತರಿದ್ದರು.

ವರದಿ: ಅಶ್ರಫ್ ಚೆಯ್ಯಂಡಾಣೆ