vಸಿದ್ದಾಪುರ, ಮಾ. ೧೦: ದೃಷ್ಟಿಹೀನ ವ್ಯಕ್ತಿಗಳಿಗೆ ಉಪಯೋಗವಾಗುವಂತಹ ನೂತನ ಮಾದರಿಯ ಕನ್ನಡಕವೊಂದನ್ನು ಸಿದ್ದಾಪುರದ ಯುವ ವಿಜ್ಞಾನಿಯೋರ್ವ ತಯಾರಿಸಿದ್ದಾನೆ. ಸಿದ್ದಾಪುರದ ಶ್ರೀ ಕೃಷ್ಣ ಬಾಲಮಂದಿರದ ೯ನೇ ತರಗತಿಯ ವಿದ್ಯಾರ್ಥಿ ದೀಕ್ಷಿತ್‌ನ ವಿಭಿನ್ನ ಆಸಕ್ತಿಯಿಂದಾಗಿ ಈ ಕನ್ನಡಕ ತಯಾರಾಗಿದೆ. ಕನ್ನಡಕದ ಎದುರು ೧ ಮೀಟರ್ ವ್ಯಾಪ್ತಿಯಲ್ಲಿ ಏನಾದರು ವಸ್ತುವಿದ್ದರೆ, ಕನ್ನಡಕವನ್ನು ಧರಿಸಿದವರಿಗೆ ‘ಬೀಪ್’ ಶಬ್ಧದ ಮೂಲಕ ಎಚ್ಚರಿಕೆ ನೀಡಲಾಗುತ್ತದೆ. ಈ ಮೂಲಕ ದೃಷ್ಟಿಹೀನರು ತಮ್ಮ ಮುಂದಿರುವ ಯಾವುದಾದರು ಅಡಚಣೆಗಳಿಂದ ಪಾರಾಗಬಹುದಾಗಿದೆ. ಕೇವಲ ಸಾವಿರ ರೂಪಾಯಿ ವೆಚ್ಚದಲ್ಲಿ ತಯಾರಾದ ಈ ಕನ್ನಡಕ, ೬ ವೋಲ್ಟ್ ಬ್ಯಾಟರಿ ಹೊಂದಿದ್ದು, ಸೌರ ಶಕ್ತಿಯ ಮೂಲಕ ಇದನ್ನು ಚಾರ್ಜ್ ಮಾಡಬಹುದಾಗಿದೆ. ಈ ಹಿಂದೆಯೂ ಈ ಆವಿಷ್ಕಾರ ಮಾಡುವಲ್ಲಿ ಪ್ರಯತ್ನ ಪಟ್ಟಿದ್ದ ದೀಕ್ಷಿತ್ ವಿಫಲನಾಗಿದ್ದು, ಈ ಬಾರಿ ಯಶಸ್ವಿಯಾಗಿದ್ದಾನೆ.

ಈ ಕನ್ನಡಕದ ವಿಶೇಷತೆ ಏನೆಂದರೆ, ಇದು ೬ ವೋಲ್ಟ್ ಬ್ಯಾಟರಿ ಹೊಂದಿದ್ದು, ಸೂರ್ಯನ ಬೆಳಕಿನಲ್ಲಿ ಜಾರ್ಚ್ ಆಗಿ ಐದು ಗಂಟೆ ನಡೆಯುತ್ತದೆ. ಇದರಲ್ಲಿ ಸೆನ್ಸರ್ ಅಳವಡಿಕೆಯಾಗಿದ್ದು, ಒಂದು ಮೀಟರ್ ವ್ಯಾಪ್ತಿಯ ಸುತ್ತಳತೆಯಲ್ಲಿ ಯಾವುದೇ ವಸ್ತು ಕನ್ನಡಕದ ಎದುರು ಬಂದರೆ ‘ಬೀಪ್’ ಶಬ್ದದಿಂದ ಬಳಸುವವರನ್ನು ಎಚ್ಚರಿಸುವುದು ಇದರ ವಿಶೇಷತೆಯಾಗಿದೆ. ರೂ. ೧೦೦೦ ಮೊತ್ತದಲ್ಲಿ ಈ ಆಧುನಿಕ ಕನ್ನಡಕ ತಯಾರಾಗಿದೆ.

ಶಾಲೆಯ ಪಠ್ಯ ಚಟುವಟಿಕೆಗೆ ಮಾತ್ರ ಸೀಮಿತವಾಗದ ದೀಕ್ಷಿತ್ ಕನ್ನಡಕದೊಂದಿಗೆ ಸ್ಪಿರಿಟ್ ಗನ್ ಒಂದನ್ನು ಕೂಡ ತಯಾರಿಸಿದ್ದಾನೆ. ಇದು ಕೃಷಿಕರಿಗೆ ಉಪಟಳ ನೀಡುವ ಪ್ರಾಣಿಗಳಾದ ಮಂಗಗಳನ್ನು ಓಡಿಸಲು ಬಳಸಬಹುದಾಗಿದೆ. ಇದು ಪ್ರಾಣಿಗಳ ದೇಹಕ್ಕೆ ಸಣ್ಣ ಪ್ರಮಾಣದಲ್ಲಿ ನೋವಾಗುವುದೇ ಹೊರತು ಯಾವುದೇ ಪ್ರಾಣಾಪಾಯವಿಲ್ಲದ ಸಾದನವೆಂಬುದು ಇದರ ವಿಶೇಷತೆ. ಈ ಗನ್‌ನಲ್ಲಿ ‘ರಬ್ಬಿಂಗ್ ಆಲ್ಕೋಹಾಲ್ ಬಳಸಿದ್ದು, ಬಟನ್ ಒಂದನ್ನು ಒತ್ತಿದಾಗ ‘ಕೆಮಿಕಲ್ ರಿಯಾಕ್ಲನ್’ನಿಂದ ಬುಲೆಟ್ (ಸಿರಿಂಜ್) ಹೊರ ಬರಲಿದೆ.

ಈ ಸ್ಪಿರಿಟ್ ಗನ್ ಕೇವಲ ರೂ. ೫೦೦ ವೆಚ್ಚದಲ್ಲಿ ತಯಾರಾಗಿದ್ದು ರೈತರಿಗೆ ಅತ್ಯಂತ ಉಪಯುಕ್ತವಾದ ಸಾದನವಾಗಿದೆ ಎಂದು ದೀಕ್ಷಿತ್ ಹೇಳುತ್ತಾನೆ.

ಒಟ್ಟಿನಲ್ಲಿ ಶಾಲಾ ಮಟ್ಟದಲ್ಲೇ ಹೊಸ ಹೊಸ ಆವಿಷ್ಕಾರಕ್ಕೆ ಮುಂದಾಗಿರುವ ಯುವ ಪೀಳಿಗೆಯು ಮುಂದಿನ ದಿನಗಳಲ್ಲಿ ಸಮಾಜಕ್ಕೆ ,ದೇಶಕ್ಕಾಗಿ ತಮ್ಮ ಕೊಡುಗೆಯನ್ನು ನೀಡುವಂತಾಗಲಿ ಎಂಬುದು ಎಲ್ಲರ ಆಶಯ.

- ವಾಸು ಎ.ಎನ್