ಮಡಿಕೇರಿ ಮಾ.೯ : ಕೋವಿಡ್ ಸೋಂಕು ಕ್ಷೀಣಗೊಂಡಿದ್ದರೂ ತಪಾಸಣೆಯ ನೆಪದಲ್ಲಿ ಅಧಿಕಾರಿಗಳು ಕೊಡಗಿನ ಚೆಕ್ ಪೋಸ್ಟ್ ಗಳು ಸೇರಿದಂತೆ ರಾಜ್ಯವ್ಯಾಪಿ ಗಡಿ ಭಾಗದಲ್ಲಿ ದಂಧೆ ನಡೆಸುತ್ತಿದ್ದಾರೆ ಎಂದು ಕೆಪಿಸಿಸಿ ಕೊಡಗು ಉಸ್ತುವಾರಿ ಟಿ.ಎಂ.ಶಾಹಿದ್ ಗಂಭೀರ ಆರೋಪ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ೨೦೧೯ ರಿಂದ ಆರಂಭಗೊAಡ ಗಡಿ ಕಿರುಕುಳ ಇನ್ನೂ ಕೂಡ ನಿಂತಿಲ್ಲ. ಪ್ರಸ್ತುತ ಕೋವಿಡ್ ಪರಿಸ್ಥಿತಿ ದೂರವಾಗಿದ್ದರೂ ವಾಹನಗಳನ್ನು ತಡೆದು ೨ ಡೋಸ್ ಕೋವಿಡ್ ಲಸಿಕೆ ಪಡೆದಿರುವ ಬಗ್ಗೆ ದಾಖಲೆ ಕೇಳಲಾಗುತ್ತಿದೆ. ದಾಖಲೆ ಇಲ್ಲದ ವಾಹನಗಳಿಂದ ನಿಯಮ ಬಾಹಿರವಾಗಿ ರೂ.೫೦೦ ರಿಂದ ೨೦೦೦ ದವರೆಗೆ ಸಂಗ್ರಹಿಸಲಾಗುತ್ತಿದೆ. ಕೇರಳ- ಕೊಡಗು ಗಡಿಯ ಮಾಕುಟ್ಟ ಚೆಕ್ ಪೋಸ್ಟ್ ನಲ್ಲಿ ದಂಧೆ ವ್ಯಾಪಕವಾಗಿದೆ ಎಂದು ಆರೋಪಿಸಿದರು.

ವಾಹನದಲ್ಲಿ ಪ್ರಯಾಣ ಬೆಳೆಸುವವರು ೨ ಡೋಸ್ ಲಸಿಕೆ ಕಡ್ಡಾಯವಾಗಿ ಪಡೆದಿರಬೇಕೆಂದು ಸರ್ಕಾರ ಎಲ್ಲೂ ನಿಯಮ ಜಾರಿ ಮಾಡಿಲ್ಲ. ಆದರೂ ಚೆಕ್ ಪೋಸ್ಟ್ಗಳಲ್ಲಿ ಇಲ್ಲದ ನಿಯಮಗಳನ್ನು ಹೇರಿ ಹಣ ವಸೂಲಿ ಮಾಡುವ ಪ್ರಯತ್ನಗಳು ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಡಿಜಿಟಲ್ ಸದಸ್ಯತ್ವ ಅಭಿಯಾನ

ಕೆಪಿಸಿಸಿ ಡಿಜಿಟಲ್ ಸದಸ್ಯತ್ವ ಅಭಿಯಾನವನ್ನು ಆರಂಭಿಸಿದ್ದು, ಸದಸ್ಯತ್ವ ಅಭಿಯಾನದ ಜವಾಬ್ದಾರಿಯನ್ನು ಪದಾಧಿಕಾರಿಗಳು ಆದ್ಯತೆಯಲ್ಲಿ ಪರಿಗಣಿಸಬೇಕೆಂದು ಶಾಹಿದ್ ತಿಳಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ ಅವರು ಮಾ.೧೪ ರಂದು ಕೊಡಗು ಜಿಲ್ಲೆಗೆ ಭೇಟಿ ನೀಡಲಿದ್ದು, ಸದಸ್ಯತ್ವ ಅಭಿಯಾನದ ಕುರಿತು ಅವಲೋಕನ ಮಾಡಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಜ, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು ಹಾಗೂ ಪ್ರಧಾನ ಕಾರ್ಯದರ್ಶಿ ಯಶ್ ದೋಲ್ಪಾಡಿ ಉಪಸ್ಥಿತರಿದ್ದರು.