ಕಣಿವೆ, ಮಾ. ೯ : ಕಳೆದ ಎರಡು ವರ್ಷಗಳಿಂದ ಸತತವಾಗಿ ಅಂರ್ರಾಷ್ಟಿçÃಯ ಮಾರುಕಟ್ಟೆಯಲ್ಲಿ ಶುಂಠಿ ಫಸಲಿಗೆ ಬೆಲೆ ಕುಸಿತವಾದ ಕಾರಣ ಅತೀವ ಪ್ರಮಾಣದಲ್ಲಿ ನಷ್ಟಕ್ಕೆ ಒಳಗಾದ ಶುಂಠಿ ಕೃಷಿಕರು ಇದೀಗ ಅಲ್ಪಾವಧಿಯ ಬೆಳೆ ಕಲ್ಲಂಗಡಿ ಕೃಷಿಯ ಮೊರೆ ಹೋಗುತ್ತಿರುವುದು ಕಂಡು ಬರುತ್ತಿದೆ. ಬೀಜ ಬಿತ್ತನೆ ಮಾಡಿದ ೬೫ ರಿಂದ ೭೦ ನೇ ದಿನದೊಳಗೆ ಕಟಾವಿಗೆ ಬರುವ ಕಲ್ಲಂಗಡಿ ಬೆಳೆ ಕುಶಾಲನಗರ ಸುತ್ತಮುತ್ತಲಿನ ಹಲವು ರೈತರನ್ನು ಕೈ ಬೀಸಿ ಕರೆದಂತಿದೆ. ಅಂದರೆ ಕಾವೇರಿ ನದಿ ದಂಡೆಯ ಎರಡೂ ಪ್ರದೇಶಗಳಲ್ಲಿ ಎಲ್ಲಿ ನೋಡಿದರಲ್ಲಿ ಪ್ಲಾಸ್ಟಿಕ್ ಹೊದಿಕೆ ಹಾಸಿದ ಕಲ್ಲಂಗಡಿ ಕೃಷಿ ಕೈಗೊಂಡ ಭೂಮಿಯೇ ಕಾಣ ಸಿಗುತ್ತಿದೆ.
ಶುಂಠಿಗೆ ದುಪ್ಪಟ್ಟು ಸಮಯ - ಹಣ ವಿನಿಯೋಗ :
ಕಳೆದ ಮೂರು ದಶಕಗಳ ಈಚೆಗೆ ಕೊಡಗು ಜಿಲ್ಲೆಯೂ ಸೇರಿದಂತೆ ಮಲೆನಾಡು ಪ್ರದೇಶಗಳ ಅಪಾರ ಪ್ರಮಾಣದ ಕೃಷಿಕರನ್ನು ಹುಚ್ಚೆಬ್ಬಿಸಿ ಗಿರಗಟಲೇ ಆಡಿಸಿದ ‘ಶುಂಠಿ' ಇದೀಗ ತನ್ನನ್ನು ನಂಬಿದ ಬಹುಪಾಲು ಕೃಷಿಕರ ಜೇಬನ್ನು ಖಾಲಿ ಮಾಡುವುದರೊಂದಿಗೆ ‘ಒಂಟಿ'ಯಾಗಿಸಿದೆ.
ಏಕೆAದರೆ ಶುಂಠಿ ಬೆಳೆಗೆ ಕನಿಷ್ಟ ಎಂದರೂ ಆರರಿಂದ ಎಂಟು ತಿಂಗಳ ಅವಧಿ ಹಾಗು ಕನಿಷ್ಟ ಎಂದರೂ ಎಕರೆಯೊಂದಕ್ಕೆ ೩ ರಿಂದ ೩.೫೦ ಲಕ್ಷ ಹಣವನ್ನು ವ್ಯಯಿಸಬೇಕಿರುವ ಕಾರಣ ಸತತವಾಗಿ
(ಮೊದಲ ಪುಟದಿಂದ) ಕೈಸುಟ್ಟುಕೊಂಡ ಕೃಷಿಕರು ಅಲ್ಪಾವಧಿ ಬೆಳೆಯಾದ ಕಲ್ಲಂಗಡಿಯತ್ತ ಚಿತ್ತ ಹರಿಸಿದ್ದಾರೆ.
ಕಲ್ಲಂಗಡಿಗೆ ನೂರು ದಿನ - ನೂರು ಸಾವಿರ
ಕನಿಷ್ಟ ನೂರು ದಿನದ ಒಳಗೆ ಕಟಾವಿಗೆ ಬರುವ ಕಲ್ಲಂಗಡಿ ಕೃಷಿಗೆ ಬಿತ್ತನೆಯಿಂದ ಕಟಾವಿನತನಕ ಎಕರೆಯೊಂದಕ್ಕೆ ನೂರು ಸಾವಿರ ರೂ. ಖರ್ಚು ಬರುತ್ತದೆ. ಇದೀಗ ಸುಡುವ ಬೇಸಗೆಯ ದಿನಗಳು ಇರುವ ಕಾರಣ ಕಲ್ಲಂಗಡಿ ಫಸಲಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗುವ ಸಾಧ್ಯತೆಗಳು ಹೆಚ್ಚಾಗಿರುವ ಕಾರಣ ಕುಶಾಲನಗರ ತಾಲೂಕಿನ ಕಾವೇರಿ ನದಿ ದಂಡೆಯ ಕೂಡಿಗೆ, ತೊರೆನೂರು, ಚಿಕ್ಕಅಳುವಾರ, ದೊಡ್ಡಅಳುವಾರ, ಹಾರಂಗಿ, ಗುಡ್ಡೆಹೊಸೂರು, ಮರೂರು, ರಾಷಿಗೇಟ್, ಚಿಕ್ಕಹೊಸೂರು, ಆವರ್ತಿ ಮೊದಲಾದ ಗ್ರಾಮಗಳ ಹಲವು ಕೃಷಿಕರು ಈಗಾಗಲೇ ಭೂಮಿಯನ್ನು ಲೀಸ್ಗೆ ಪಡೆದು ಕಲ್ಲಂಗಡಿ ಕೃಷಿಗೆ ಮುಂದಾಗಿದ್ದಾರೆ. ಅಂದರೆ ಕಲ್ಲಂಗಡಿ ಬಿತ್ತನೆ ಮಾಡಿದ ತಿಂಗಳ ಅವಧಿಯ ಕೃಷಿಕರು ಕೆಲವೆಡೆ ಕಂಡು ಬಂದರೆ, ಇನ್ನು ಕೆಲವು ಕೃಷಿಕರು ಈಗಷ್ಟೇ ಬಿತ್ತನೆ ಮಾಡುತ್ತಿರುವುದು ಕಂಡು ಬರುತ್ತಿದೆ.
ಕಲ್ಲಂಗಡಿ ಬೆಳೆ ವಿಧಾನ
ಮೂರು ತಿಂಗಳ ಅವಧಿಯ ಒಂದು ಎಕರೆ ಭೂಮಿಯಲ್ಲಿ ಕಲ್ಲಂಗಡಿ ಬೆಳೆಯಲು ಮೊದಲು ಭೂಮಿಯನ್ನು ಉಳುಮೆ ಮಾಡಿ ಹದಗೊಳಿಸಲು ಕನಿಷ್ಟ ೬ ಸಾವಿರ ವ್ಯಯವಾಗುತ್ತದೆ.
ನಂತರ ೬ ರಿಂದ ೭ ಟ್ರಾಕ್ಟರ್ ದನದ ಗೊಬ್ಬರವನ್ನು ಮಣ್ಣಿನಲ್ಲಿ ಮಿಶ್ರಣ ಮಾಡಲು ೨೧ ಸಾವಿರ ವೆಚ್ಚ, ಹಾಗೆಯೇ ಒಂದು ಎಕರೆ ಭೂಮಿಯಲ್ಲಿ ೨,೦೦೦ ಮೀಟರ್ನಷ್ಟು ಪ್ಲಾಸ್ಟಿಕ್ ಮಲ್ಚಿಂಗ್ ಶೀಟ್ ಅಳವಡಿಸಲು ಕನಿಷ್ಟ ೬ ಸಾವಿರ, ಹನಿ ನೀರಾವರಿ ಅಳವಡಿಸಲು ೪೦ ಸಾವಿರ, ಕಲ್ಲಂಗಡಿ ಸಸಿ ಮಡಿಗಳನ್ನು ಬಿತ್ತನೆ ಮಾಡುವ ಮುನ್ನಾ ರಸಗೊಬ್ಬರಗಳ ಅಳವಡಿಕೆಗೆ ೬ ಸಾವಿರ, ಹಾಗೆಯೆ ಒಂದು ಎಕರೆ ಭೂಮಿಯಲ್ಲಿ ೫,೦೦೦ ಕಲ್ಲಂಗಡಿ ಸಸಿ ಮಡಿಗಳನ್ನು ನಾಟಿ ಮಾಡುವ ಪೂರ್ವದಲ್ಲಿ ನರ್ಸರಿಯಲ್ಲಿ ಬೆಳೆಸಲು ೨೨ ರಿಂದ ೨೫ ನೇ ದಿನದವರೆಗೆ ಗಿಡವೊಂದಕ್ಕೆ ಕನಿಷ್ಟ ೪೦ ಪೈಸೆ ಯಂತೆ ೨೦ ಸಾವಿರ ರೂ ವ್ಯಯಮಾಡಲಾಗುತ್ತದೆ. ಗಿಡವನ್ನು ನಾಟಿ ಮಾಡಿದ ಆರನೇ ದಿನದಿಂದ ಪ್ರತೀ ಗಿಡಗಳ ಬುಡಗಳಿಗೆ ತಲಾ ೫೦ ಮಿಲಿ ಯಂತೆ ರಾಸಾಯನಿಕಗಳನ್ನು ಮಿಶ್ರಣ ಮಾಡಿದ ನೀರನ್ನು ಹನಿ ನೀರಾವರಿ ವ್ಯವಸ್ಥೆಯಲ್ಲಿ ಹರಿಸಲಾಗುತ್ತದೆ.
ಹೀಗೆ ದಿನದಿಂದ ದಿನಕ್ಕೂ ಹಸುಳೆ ಮಗುವನ್ನು ತಾಯಿ ಆರೈಕೆ ಮಾಡುವ ಮಾದರಿಯಲ್ಲಿಯೇ ಈ ಗಿಡಗಳನ್ನು ಆರೈಕೆ ಮಾಡಬೇಕು ಎನ್ನುತ್ತಾರೆ ಕಲ್ಲಂಗಡಿ ಕೃಷಿಕ ಆವರ್ತಿ ಗ್ರಾಮದ ಎ.ಎಸ್.ಚಂದ್ರಶೇಖರ್ ಮತ್ತೆ ಒಂದೆರಡು ಬಾರಿ ಗಿಡದೊಳಗೆ ಕಳೆ ತೆಗೆಯಲಾಗುತ್ತದೆ. ಗಿಡಗಳು ಬೆಳೆಯುತ್ತಾ ಹೋದಂತೆ ಹೂಜಿಗಳನ್ನು ಅಂದರೆ ಕೀಟ ಬಾಧೆ ನಿಯಂತ್ರಿಸಲು ರಸಾಯನಿಕ ಅದ್ದಿದ ಮ್ಯಾಟ್ ಅನ್ನು ಅಲ್ಲಲ್ಲಿ ಗಿಡದೊಳಗೆ ಇಡಲಾಗುತ್ತದೆ.
ಜೇನು ಹುಳು ಬಂದರೆ ಮಾತ್ರ ಇಳುವರಿ
ಕೃಷಿಕರು ನಾವುಗಳು ಅದೆಷ್ಟೇ ಹಣ ಹಾಗೂ ಶ್ರಮ ವ್ಯಯಿಸಿ ಕೃಷಿ ಮಾಡಿದರೂ ಕೂಡ ಹಣ್ಣು, ತರಕಾರಿ ಬೆಳೆಗಳ ಗಿಡಗಳಲ್ಲಿ ಅರಳುವ ಹೂವುಗಳಿಗೆ ಜೇನು ಹುಳುಗಳು ಅಥವಾ ದುಂಬಿಗಳು ಬಂದು ಪರಾಗಸ್ಪರ್ಶ ಮಾಡಿದರೆ ಮಾತ್ರ ನಾವು ಇಳುವರಿ ತೆಗೆಯಲಿ ಸಾಧ್ಯ ಎಂದು ಹೇಳುವ ಕೃಷಿಕ ಚಂದ್ರಶೇಖರ್, ಜೇನುಹುಳುಗಳನ್ನು ಆಕರ್ಷಿಸಲು ಕೆಲವು ಕೃಷಿಕರು ಬೆಲ್ಲದ ಸ್ಪ್ರೇ ಕೂಡ ಮಾಡುತ್ತಾರೆ.
ಆದರೆ ರೈತನ ನಿಜವಾದ ಮಿತ್ರನಾಗಿರುವ ಜೇನು ಹುಳುಗಳು ಪ್ರಕೃತಿಯಲ್ಲಿ ನಾಶವಾದರೆ ಕೃಷಿಯು ನಾಶವಾದಂತೆ ಎನ್ನುತ್ತಾರೆ.
ಕಾಡುವ ಸೊರಗು ರೋಗ
ಕೃಷಿ ಮಾಡುವ ಭೂಮಿಯಲ್ಲಿ ಸೂಕ್ಷö್ಮ ಜೀವಾಣುಗಳ ಕೊರತೆ ಏನಾದರೂ ಬಾಧಿಸಿದರೆ ಹಲವು ರೋಗಗಳು ಬೆಳೆಗೆ ಬಾಧಿಸುತ್ತವೆ ಎಂದು ಹೇಳುವ ಕೃಷಿಕ ಚಂದ್ರಶೇಖರ್, ಕಲ್ಲಂಗಡಿ ಬೆಳೆಗೆ ಕಂಟಕ ಎಂದರೆ ಬೆಳೆಯ ೪೫ ದಿನಗಳ ಬಳಿಕ ಕಾಡಬಹುದಾದ ಸೊರಗು ರೋಗ ಒಂದು ಕಂಟಕವಾದ ರೋಗ. ಆದರೆ ನಾವು ಕಾಲ ಕಾಲಕ್ಕೆ ನಿರ್ವಹಣೆ ಮಾಡುವ ಪದ್ಧತಿಯ ಮೇಲೆ ಇದು ಅವಲಂಬಿತವಾಗಿರುತ್ತದೆ ಎನ್ನುತ್ತಾರೆ.
ಒಟ್ಟಾರೆ ಯಾರೋ ಒಬ್ಬರು ಯಾವುದಾದರೂ ಬೆಳೆಗೆ ಮುಂದಾಗಿ ಯಶಸ್ವಿಯಾದರೆ ಮತ್ತೆ ಅದೇ ಬೆಳೆಗೆ ಉಳಿದವರು ಮುಂದಾಗುತ್ತಾರೆ.
ಅದೇ ರೀತಿ ಈಗ ಶುಂಠಿ ಕೈಕೊಟ್ಟದ್ದರಿಂದ ಅಲ್ಲಿ ಕಳೆದು ಹೋದುದನ್ನು ಕಲ್ಲಂಗಡಿಯ ಕೃಷಿಯಲ್ಲಿ ಹುಡುಕುವ ಪ್ರಯತ್ನದಲ್ಲಿರುವ ಕೃಷಿಕರಿಗೆ ವಾತಾವರಣ ‘ಖುಷಿ' ಕೊಡಲಿ ಎಂದು ಆಶಿಸೋಣವೇ.
-ಕೆ.ಎಸ್.ಮೂರ್ತಿ