ಮಡಿಕೇರಿ, ಮಾ. ೧೦: ನಗರಸಭೆಯ ವಾರ್ಡ್ಗಳಿಗೆ ಪ್ರತಿ ಗುರುವಾರ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿ ಸೂಕ್ತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿರುವ ‘ನಗರಸಭೆ ನಡಿಗೆ ವಾರ್ಡ್ಗಳ ಕಡೆಗೆ’ ಎಂಬ ಕಾರ್ಯಕ್ರಮಕ್ಕೆ ಇಂದು ಚಾಲನೆ ದೊರೆಯಿತು.
ವಾರ್ಡ್ ೧ ವಿದ್ಯಾನಗರಕ್ಕೆ ಇಂದು ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ನೇತೃತ್ವದಲ್ಲಿ ಸ್ಥಳೀಯ ಪ್ರತಿನಿಧಿ ಹಾಗೂ ನಗರಸಭಾ ಅಧಿಕಾರಿಗಳನ್ನು ಒಳಗೊಂಡು ತೆರಳಿದ ತಂಡ ಅಲ್ಲಿನ ಸಮಸ್ಯೆಗಳ ಬಗ್ಗೆ ಪರಿಶೀಲಿಸಿದರು. ಸ್ಥಳೀಯರ ಕೋರಿಕೆಗಳನ್ನು ಆಲಿಸಿತು. ರಸ್ತೆ ದುರವಸ್ಥೆ, ಅಸಮರ್ಪಕ ಚರಂಡಿ ವ್ಯವಸ್ಥೆ, ಖಾತೆ ಬದಲಾವಣೆ ಸೇರಿದಂತೆ ನಗರಸಭೆಯಿಂದ ಪರಿಹರಿಸಬಹುದಾದ ಸಮಸ್ಯೆಗಳ ಬಗ್ಗೆ ಅಲ್ಲಿನ ನಿವಾಸಿಗಳು ನಗರಸಭಾ ತಂಡದ ಗಮನಕ್ಕೆ ತಂದರು.
ನಾಗರಿಕರ ಸಮಸ್ಯೆಗಳನ್ನು ಆಲಿಸುತ್ತಿದ್ದ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಅವುಗಳನ್ನು ಪಟ್ಟಿ ಮಾಡಿಕೊಳ್ಳುವಂತೆಯೂ ಜೊತೆಗೆ ಪರಿಹರಿಸಲು ಕ್ರಮಕೈಗೊಳ್ಳುವಂತೆಯೂ ಅಧಿಕಾರಿಗಳಿಗೆ ಸೂಚಿಸುತ್ತಿದ್ದುದು ಕಂಡು ಬಂತು. ಮುಳಿಯ ಬಡಾವಣೆಗೆ ತೆರಳಿದ ಸಂದರ್ಭ ಅಲ್ಲಿನ ನಿವಾಸಿಗಳು, ಬೀದಿ ದೀಪದ ಸಮಸ್ಯೆ, ರಸ್ತೆಗಳ ಗುಂಡಿಮುಚ್ಚುವುದು, ರಾಜಕಾಲುವೆಗೆ ತಡೆಗೋಡೆ ನಿರ್ಮಾಣ ಮಾಡುವುದು, ಸುಬ್ರಮಣಿ ನಗರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಕೆಳಗಿನ ಕಸಕಡ್ಡಿಗಳನ್ನು ತೆಗೆದು ಸರಾಗವಾಗಿ ನೀರು
(ಮೊದಲ ಪುಟದಿಂದ) ಹರಿಯುವಂತೆ ಮಾಡಬೇಕು. ಕಸ ಸಂಗ್ರಹಿಸುವ ವಾಹನ ಪ್ರತಿದಿನವೂ ತಪ್ಪದೇ ಬರಬೇಕು ಎಂಬಿತ್ಯಾದಿ ಹಲವು ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ನಗರಸಭೆಯ ತಂಡಕ್ಕೆ ಸಲ್ಲಿಸಿದರು.
‘ಶಕ್ತಿ’ಯೊಂದಿಗೆ ಮಾತನಾಡಿದ ಅಧ್ಯಕ್ಷೆ ಅನಿತಾ ಪೂವಯ್ಯ ವಾರ್ಡ್ ೧ರ ಸಮಸ್ಯೆಗಳ ಬಗ್ಗೆ ಗಮನಕ್ಕೆ ಬಂದಿದ್ದು, ಅವುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಲ್ಲಿನ ನಗರಸಭಾ ಸದಸ್ಯರೊಂದಿಗೆ ಚರ್ಚಿಸಿ ಶೀಘ್ರ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ವಾರ್ಡ್ಗೆ ಭೇಟಿ ನೀಡಿದ ಸಂದರ್ಭ ನಗರಸಭಾ ಉಪಾಧ್ಯಕ್ಷೆ ಸವಿತಾ ರಾಕೇಶ್, ಆಯುಕ್ತ ರಾಮದಾಸ್, ನಗರಸಭಾ ಸದಸ್ಯರುಗಳಾದ ಕಲಾವತಿ, ಮಹೇಶ್‌ಜೈನಿ, ಅಪ್ಪಣ್ಣ, ಅಧಿಕಾರಿ ವರ್ಗದವರು ಹಾಜರಿದ್ದರು. ನಗರಸಭೆಯ ಈ ಕಾರ್ಯಕ್ರಮ ಮುಂದುವರಿಯಲಿದ್ದು, ತಾ. ೧೭ ರಂದು ೨೩ನೇ ವಾರ್ಡ್ಗೆ ನಗರಸಭಾ ತಂಡ ಭೇಟಿ ನೀಡಲಿವೆ.