ಸೋಮವಾರಪೇಟೆ,ಮಾ.೮: ಜಿಲ್ಲೆಯ ರೈತರು ಅನೇಕ ದಶಕಗಳಿಂದ ಎದುರು ನೋಡುತ್ತಿರುವ ಉಚಿತ ವಿದ್ಯುತ್ ಬೇಡಿಕೆಯನ್ನು ಸರ್ಕಾರ ಈಡೇರಿಸಿಲ್ಲ. ಈ ಹಿನ್ನೆಲೆ ಶಾಸಕರ ಸಹಕಾರ ಪಡೆದು ಬೆಂಗಳೂರು ಚಲೋ ನಡೆಸಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ನಿರ್ಧರಿಸಲಾಗಿದೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ದಿನೇಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿವೇಶನ ಹಾಗೂ ಬಜೆಟ್ನಲ್ಲಿ ೧೦ ಹೆಚ್.ಪಿ. ವರೆಗಿನ ರೈತರ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಘೋಷಣೆ ಮಾಡುವ ನಿರೀಕ್ಷೆಯಿತ್ತು. ಸೋಮವಾರಪೇಟೆಯಲ್ಲಿ ೧೯ ದಿನಗಳ ಕಾಲ ಧರಣಿ ಸತ್ಯಾಗ್ರಹ ನಡೆಸಿದ್ದರೂ ಸರ್ಕಾರವು ರೈತರ ಬೇಡಿಕೆಗಳಿಗೆ ಸ್ಪಂದಿಸಿಲ್ಲ ಎಂದು ಅಸಮಾಧಾನ ವಕ್ತಪಡಿಸಿದರು.
ಜಿಲ್ಲೆಯ ಈರ್ವರು ಶಾಸಕರುಗಳಾದ ರಂಜನ್ ಹಾಗೂ ಬೋಪಯ್ಯ ಅವರುಗಳು ಖುದ್ದು ಮುಖ್ಯಮಂತ್ರಿಗಳು ಹಾಗೂ ಇಂಧನ ಸಚಿವರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಜಿಲ್ಲೆಯ ರೈತರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಯಾದ ಉಚಿತ ವಿದ್ಯುತ್ ಬೇಡಿಕೆಯನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸರ್ಕಾರದ ಮೇಲೆ ಒತ್ತಡ ಹೇರಲು ಶಾಸಕರುಗಳ ಸಹಕಾರದಿಂದ ಬೆಂಗಳೂರು ಚಲೋ ನಡೆಸಲಾಗುವುದು ಎಂದರು.
ಉಚಿತ ವಿದ್ಯುತ್ ಬೇಡಿಕೆಯನ್ನು ಈಡೇರಿಸಲು ಈಗಲೂ ಪ್ರಯತ್ನ ನಡೆದಿದೆ ಎಂದು ಶಾಸಕ ರಂಜನ್ ತಿಳಿಸಿದ್ದಾರೆ. ರೈತರು ಪಡೆದಿರುವ ವಿದ್ಯುತ್ ಸಂಪರ್ಕವನ್ನು ಕಡಿತ ಗೊಳಿಸಲು ಸಿಬ್ಬಂದಿಗಳು ಆಗಮಿಸಿದರೆ ಅವಕಾಶ ನೀಡಬಾರದು. ಅಂತಹ ಪರಿಸ್ಥಿತಿ ಎದುರಾದರೆ ರೈತ ಸಂಘವು ಬೆಳೆಗಾರರ ಪರ ನಿಲ್ಲಲಿದೆ ಎಂದು ದಿನೇಶ್ ತಿಳಿಸಿದರು.
ಗೋಷ್ಠಿಯಲ್ಲಿದ್ದ ಸಂಘದ ಸಂಚಾಲಕ ಹೂವಯ್ಯ ಮಾತನಾಡಿ, ಜಿಲ್ಲೆಯ ರೈತರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳ ಗಮನ ಸೆಳೆಯಲಾಗಿದೆ. ಸೋಮವಾರಪೇಟೆ ತಾಲೂಕು ಕಚೇರಿಯಲ್ಲಿ ರೈತ ಸಂಘದ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದರು.
ಆಹಾರ ಇಲಾಖೆಯಿಂದ ಪಡಿತರ ಚೀಟಿ ಸಮಸ್ಯೆಗಳು ಬಗೆಹರಿ ಯುತ್ತಿಲ್ಲ. ತಾಲೂಕು ಕಚೇರಿಯಲ್ಲಿ ಆರ್ಟಿಸಿ ಸಮಸ್ಯೆ ಉದ್ಭವಿಸಿದ್ದು, ೩ ರಿಂದ ೬ ತಿಂಗಳಿಗೆ ಹೆಸರು ಬದಲಾಗು ತ್ತಿದೆ. ಹಕ್ಕು ಪತ್ರ ಪಡೆದುಕೊಂಡಿದ್ದರೂ ಜಾಗ ದುರಸ್ತಿಯಾಗುತ್ತಿಲ್ಲ. ಇದರಿಂದ ರೈತರು ತೊಂದರೆಗೆ ಒಳಗಾಗಿದ್ದಾರೆ. ಈ ಬಗ್ಗೆ ತಹಶೀಲ್ದಾರ್ ಗಮನಹರಿಸ ಬೇಕೆಂದು ನಾಗರಾಜ್ ಆಗ್ರಹಿಸಿದರು.
ಯಡವಾರೆ ಗ್ರಾಮದ ರೈತ ಸಂಘದ ಮುಖಂಡರಾದ ಅಶೋಕ್ ಹಾಗೂ ಅವರ ಸಹೋದರನ ನಡುವೆ ಆಸ್ತಿ ವಿಷಯದಲ್ಲಿ ತಗಾದೆಯಿದ್ದು, ಕಳೆದ ತಾ. ೨೭ರಂದು ಸ್ಥಳೀಯ ಕೆಲ ಯುವಕರು ಅಶೋಕ್ ಅವರ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಪೊಲೀಸ್ ದೂರು ನೀಡಿದ್ದರೂ ಕಾನೂನು ಕ್ರಮ ಕೈಗೊಂಡಿಲ್ಲ. ತಕ್ಷಣ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳ ಬೇಕು. ತಪ್ಪಿದಲ್ಲಿ ರೈತ ಸಂಘದಿAದ ಪ್ರತಿಭಟನೆ ನಡೆಸಲಾಗುವುದು ಎಂದು ಅಧ್ಯಕ್ಷ ದಿನೇಶ್, ರಾಜಪ್ಪ, ಯಡೂರು ಕುಶಾಲಪ್ಪ ಅವರುಗಳು ಎಚ್ಚರಿಸಿದರು.