ಮಡಿಕೇರಿ, ಮಾ. ೭: ವಾರದ ಆರಂಭದ ದಿನವಾದ ಸೋಮವಾರವೇ ಮಡಿಕೇರಿ ನಗರದಲ್ಲಿ ವಿದ್ಯುತ್ ಕಡಿಗೊಳಿಸುವ ಮೂಲಕ ವ್ಯಾಪಾರ, ವಹಿವಾಟಿಗೆ ಅಡಚಣೆ ಉಂಟು ಮಾಡಲಾಗಿದೆ ಎಂದು ವರ್ತಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹಿಂದೆಯೇ ವ್ಯವಹಾರದ ದಿನಗಳಂದು ವಿದ್ಯುತ್ ಕಡಿತಗೊಳಿಸದೆ ರಜಾ ದಿನಗಳಲ್ಲಿ ವಿದ್ಯುತ್ ಮಾರ್ಗ ದುರಸ್ತಿ ಪಡಿಸುವಂತೆ ಮನವಿ ಮಾಡಿಕೊಂಡಿದ್ದರೂ ಇಂದು ಬೆಳಗ್ಗೆಯಿಂದ ಸಂಜೆಯವರೆಗೆ ವಿದ್ಯುತ್ ಇಲ್ಲದಂತೆ ಮಾಡಲಾಗಿದೆ. ಇದರಿಂದ ವ್ಯಾಪಾರೋದ್ಯಮಗಳು ಸ್ಥಗಿತಗೊಂಡು ನಷ್ಟ ಉಂಟಾಗಿದೆ, ಅಲ್ಲದೆ ಸಾರ್ವಜನಿಕರ ಕೆಲಸ ಕಾರ್ಯಗಳಿಗೂ ಅಡಚಣೆಯಾಗಿದೆ. ವಿದ್ಯುತ್ ಕಡಿತಗೊಳಿಸುವ ದಿನವನ್ನು ಜನರಿಗೆ ತೊಂದರೆಯಾಗದAತೆ ನಿಗದಿಗೊಳಿಸಬೇಕೆಂದು ವರ್ತಕರು ಒತ್ತಾಯಿಸಿದ್ದಾರೆ.

ಈ ಕುರಿತು ಚೆಸ್ಕಾಂ ನ ಕಾರ್ಯನಿರ್ವಾಹಕ ಅಭಿಯಂತರ ಅಶೋಕ್ ಅವರ ಗಮನ ಸೆಳೆದ ಚೇಂಬರ್ ಆಫ್ ಕಾಮರ್ಸ್ನ ಪ್ರಧಾನ ಕಾರ್ಯದರ್ಶಿ ನವೀನ್ ಅಂಬೆಕಲ್ ಯಾವುದೇ ಕಾರಣಕ್ಕೂ ವ್ಯವಹಾರದ ದಿನಗಳಂದು ವಿದ್ಯುತ್ ಕಡಿತಗೊಳಿಸಬಾರದೆಂದು ಮನವಿ ಮಾಡಿದರು. ವಾರದ ಆರಂಭದ ದಿನವೇ ವಿದ್ಯುತ್ ಇಲ್ಲದಂತೆ ಮಾಡಿರುವ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಸ್ಪಂದಿಸಿದ ಅಭಿಯಂತರರು ಇನ್ನು ಮುಂದೆ ಸೋಮವಾರ ವಿದ್ಯುತ್ ಕಡಿತಗೊಳಿಸುವುದಿಲ್ಲವೆಂದು ಭರವಸೆ ನೀಡಿದರು.