ಮಡಿಕೇರಿ, ಮಾ. ೮: ಶ್ರೀಮಂಗಲ ಸನಿಹದ ಹರಿಹರ ಗ್ರಾಮದಲ್ಲಿ ಆಗಾಗ್ಗೆ ಹುಲಿ ತಿರುಗಾಡುತ್ತಿದ್ದು ಜನತೆ ಆತಂಕದಲ್ಲಿ ದಿನ ಕಳೆಯುವಂತಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಅಲ್ಲಿನ ಮಲ್ಲಿಗೆ ಎಂಬವರಿಗೆ ಸೇರಿದ್ದ ಹಸುವನ್ನು ಕೊಂದು ಹಾಕಿದೆ. ಇದೀಗ ಒಂದೆರಡು ದಿನದಿಂದೆ ಸುಬ್ರಹ್ಮಣ್ಯ ದೇವಾಲಯದ ಬಳಿಯ ಕಾಲೋನಿಯಲ್ಲಿ ಹಂದಿಯನ್ನು ಕೊಂದಿದ್ದು ನಂತರದಲ್ಲಿ ಅದನ್ನು ಕಬಳಿಸಿದೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಕ್ಯಾಮರಾವನ್ನು ಅಳವಡಿಸಿದ್ದಾರೆ. ಇದೀಗ ಮತ್ತೆಯೂ ರಸ್ತೆ ಬದಿಯಲ್ಲೇ ಜನನಿಬಿಡ ಸ್ಥಳದಲ್ಲಿ ಹುಲಿ ಹೆಜ್ಜೆ ಕಂಡು ಬರುತ್ತಿದ್ದು, ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸಲು, ಕಾರ್ಮಿಕರು ತೋಟ ಕೆಲಸಕ್ಕೆ ತೆರಳಲು ಭಯ ಪಡುವಂತಾಗಿದೆ ಎಂದು ಸ್ಥಳೀಯರಾದ ಚಿಮ್ಮುಣಿರ ರಾಜೇಶ್ ಹೇಳಿದ್ದಾರೆ. ಅರಣ್ಯ ಇಲಾಖೆ ಈ ವಿಭಾಗದಲ್ಲಿ ಬೋನ್ ಅಳವಡಿಸಿ ನಾಡಿನಲ್ಲಿ ತಿರುಗಾಡುತ್ತಿರುವ ಈ ವ್ಯಾಘ್ರನನ್ನು ಸೆರೆಹಿಡಿಯುವುದೇ ಸೂಕ್ತ ಎಂದು ಅವರು ಆಗ್ರಹಿಸಿದ್ದಾರೆ.