ಮಡಿಕೇರಿ, ಮಾ.೭ : ಹಿಮಪಾತಕ್ಕೆ ಸಿಲುಕಿ ಮೃತಪಟ್ಟ ಯೋಧ ಹವಾಲ್ದಾರ್ ಅಲ್ತಾಫ್ ಅಹಮ್ಮದ್ ಅವರ ಕುಟುಂಬಕ್ಕೆ ನೆರವು ಮತ್ತು ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕೆಂದು ಮಡಿಕೇರಿ ನಗರ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಒತ್ತಾಯಿಸಿದೆ.
ಹೆಚ್ಚುವರಿ ಜಿಲ್ಲಾಧಿಕಾರಿ ನಂಜುAಡೇಗೌಡ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಅಲ್ಪಸಂಖ್ಯಾತರ ಘಟಕದ ನಗರಾಧ್ಯಕ್ಷ ಕೆ.ಜಿ.ಪೀಟರ್ ಹಾಗೂ ಪ್ರಮುಖರು ಭಾರತ ದೇಶದ ಗಡಿ ಕಾಯುವ ಸಂದರ್ಭ ಸೇವೆಯಲ್ಲಿದ್ದಾಗಲೇ ಶ್ರೀನಗರದಲ್ಲಿ ಹಿಮಪಾತಕ್ಕೆ ಸಿಲುಕಿ ಮೃತಪಟ್ಟ ವೀರಾಜಪೇಟೆಯ ವೀರಯೋಧ ಹವಾಲ್ದಾರ್ ಅಲ್ತಾಫ್ ಅಹಮ್ಮದ್ ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಬಡತನದಲ್ಲೇ ಜೀವನ ಸಾಗಿಸುತ್ತಿದ್ದು, ಇರಲು ಸ್ವಂತ ಸೂರು ಕೂಡ ಇಲ್ಲದಾಗಿದೆ ಎಂದು ಗಮನ ಸೆಳೆದರು.
ಪತಿಯನ್ನು ಕಳೆದುಕೊಂಡಿರುವ ಜುಬೇರಿಯಾ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ದೇಶದ ರಕ್ಷಣೆಯ ಸಂದರ್ಭ ಹುತಾತ್ಮರಾದ ಅಲ್ತಾಫ್ ಅಹಮ್ಮದ್ ಅವರ ಕುಟುಂಬಕ್ಕೆ ಅಗತ್ಯ ನೆರವು ಘೋಷಿಸಬೇಕೆಂದು ಒತ್ತಾಯಿಸಿದರು.
ಪತ್ನಿ ಹಾಗೂ ಮಕ್ಕಳಿಗೆ ರೂ.೧೦ ಲಕ್ಷ ಪರಿಹಾರ ನೀಡಬೇಕು, ಸ್ವಂತ ಮನೆ ಇಲ್ಲದ ಕಾರಣ ಎಲ್ಲಾ ಮೂಲಭೂತ ಸೌಕರ್ಯಗಳಿರುವ ಮನೆಯನ್ನು ಸರ್ಕಾರದ ಮೂಲಕ ನಿರ್ಮಿಸಿಕೊಡಬೇಕು, ಮಕ್ಕಳು ಸೇನಾಧಿಕಾರಿಗಳಾಗುವ ಇಚ್ಛೆ ಹೊಂದಿರುವುದರಿAದ ಕೂಡಿಗೆ ಸೈನಿಕ ಶಾಲೆಯಲ್ಲಿ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿಕೊಡಬೇಕು, ಇತರ ಶಾಲೆಗಳಲ್ಲಿ ವಿದ್ಯಾಭ್ಯಾಸ ಮುಂದುವರೆಸಿದರೆ ಉಚಿತ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಬೇಕು ಮತ್ತು ಯುವ ಸಮೂಹದಲ್ಲಿ ಸೇನಾ ಸ್ಫೂರ್ತಿಯನ್ನು ತುಂಬಲು ವೀರಾಜಪೇಟೆ ಪಟ್ಟಣದ ಯಾವುದಾದರೊಂದು ರಸ್ತೆಗೆ ಯೋಧ ಹವಾಲ್ದಾರ್ ಅಲ್ತಾಫ್ ಅಹಮ್ಮದ್ ಅವರ ಹೆಸರನ್ನಿಡಬೇಕು ಎಂದು ಪೀಟರ್ ಮನವಿ ಮಾಡಿದರು.
ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್, ಉಪಾಧ್ಯಕ್ಷ ಕೆ.ಜೆ. ಸುನಿಲ್, ಪ್ರಧಾನ ಕಾರ್ಯದರ್ಶಿ ಫಯಾಜ್, ಉಪಾಧ್ಯಕ್ಷ ಎಂ.ಎA.ಯಾಕುಬ್, ಪ್ರಮುಖರಾದ ಶೌಕತ್ ಹಾಗೂ ಜಾಕಿರ್ ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು. ಇದಕ್ಕೂ ಮೊದಲು ಪ್ರಮುಖರು ಅಲ್ತಾಫ್ ಅಹಮ್ಮದ್ ಅವರ ಮನೆಗೆ ತೆರಳಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.