ಮಡಿಕೇರಿ, ಮಾ. ೭: ಜಿಲ್ಲೆಯ ೩ ತಾಲೂಕುಗಳಲ್ಲಿ ಜಿಲ್ಲಾ ಸರ್ವೆ ಇಲಾಖೆ ನಡೆಸಿದ ಭೂಮಾಪನಾ ಸಂದರ್ಭ ೫೪೭ ಕೆರೆಗಳ ಪೈಕಿ ೫೦೯ ಕೆರೆಗಳ ಸರ್ವೆ ಮುಕ್ತಾಯಗೊಂಡಿದೆ. ಈ ಪೈಕಿ ೧೦೩ ಕೆರೆಗಳನ್ನು ಒತ್ತುವರಿ ಮಾಡಲಾಗಿರುವುದು ಪತ್ತೆಯಾಗಿದೆ. ಈಗಾಗಲೇ ೭೨ ಕೆರೆಗಳನ್ನು ಜಿಲ್ಲೆಯ ಕಂದಾಯಾಧಿಕಾರಿಗಳು ತೆರವುಗೊಳಿಸಿರುವುದು ಖಾತರಿಯಾಗಿದೆ. ಸೋಮವಾರಪೇಟೆ, ಮಡಿಕೇರಿ ಹಾಗೂ ವೀರಾಜಪೇಟೆ ತಾಲೂಕುಗಳಲ್ಲಿ ಸರ್ವೆ ಮಾಡಲಾಗಿದ್ದು, ಭೂಮಾಪನಾ ಇಲಾಖೆಯನ್ವಯ ಕುಶಾಲನಗರ ಮತ್ತು ಪೊನ್ನಂಪೇಟೆ ನೂತನ ತಾಲೂಕುಗಳ ಭೂಮಾಪನಾ ಹಳೆಯ ದಾಖಲೆಗಳು ಈ ೩ ತಾಲೂಕುಗಳಲ್ಲಿಯೇ ಸೇರಿದ್ದುದರಿಂದ ಇಡೀ ಜಿಲ್ಲೆಯ ಸರ್ವೆ ಕಾರ್ಯ ಮುಕ್ತಾಯಗೊಂಡಿದೆ. ರಾಜ್ಯ ಕೆರೆಗಳ ಸಂರಕ್ಷಣಾ ಪ್ರಾಧಿಕಾರದ ನಿರ್ದೇಶನದಂತೆ ಈ ಸರ್ವೆ ಕಾರ್ಯ ನಡೆದಿದೆ. ಜಿಲ್ಲಾ ಭೂಮಾಪನಾ ಇಲಾಖೆಯ ಉಪನಿರ್ದೇಶಕ (ಡಿಡಿಎಲ್ಆರ್) ಪಿ. ಶ್ರೀನಿವಾಸ್ ಅವರ ಪ್ರಕಾರ ಇನ್ನೂ ೨೮ ಕೆರೆಗಳ ಸರ್ವೆ ಕಾರ್ಯ ನಡೆಸಬೇಕಾಗಿದೆ. ಇದರಲ್ಲಿ ಸೋಮವಾರಪೇಟೆಯ ೧೦ ಹಾಗೂ ವೀರಾಜಪೇಟೆಯ ೨೮ ಕೆರೆಗಳು ಸೇರಿವೆ. ಕುಶಾಲನಗರ ಮತ್ತು ಸೋಮವಾರಪೇಟೆ ತಾಲೂಕಿನ ಕೆಲವೆಡೆ ಕೆರೆಗಳೇ ಮಾಯವಾಗಿದ್ದು, ಅಂತಹವುಗಳ ದಾಖಲೆಗಳನ್ನು ಪುನರ್ ಪರಿಶೀಲನೆ ಮಾಡಲಾಗುತ್ತಿದೆ ಎಂದು ಶ್ರೀನಿವಾಸ್ ಮಾಹಿತಿಯಿತ್ತರು.
ಜಿಲ್ಲೆಯಲ್ಲಿ ಕೆರೆಗಳ ತೆರವು ಕಾರ್ಯಾ ಚರಣೆಯನ್ನು ಜಿಲ್ಲಾಧಿಕಾರಿ
(ಮೊದಲ ಪುಟದಿಂದ) ಡಾ. ಸತೀಶ ಬಿ.ಸಿ. ಅವರು ಖಚಿತಪಡಿಸಿದ್ದಾರೆ. ಮಡಿಕೇರಿ ತಹಶೀಲ್ದಾರ್ ಮಹೇಶ್, ವೀರಾಜಪೇಟೆ ತಹಶೀಲ್ದಾರ್ ಯೋಗಾನಂದ ಹಾಗೂ ಸೋಮವಾರಪೇಟೆ ತಹಶೀಲ್ದಾರ್ ಗೋವಿಂದರಾಜ್ ಇವರುಗಳ ಉಸ್ತುವಾರಿಯಲ್ಲಿ ತೆರವು ಕಾರ್ಯಾಚರಣೆ ನಡೆಯತ್ತಿರುವುದಾಗಿ ‘ಶಕ್ತಿ’ಗೆ ತಿಳಿದುಬಂದಿದೆ. ಡಿಡಿಎಲ್ಆರ್ ಶ್ರೀನಿವಾಸ್ ಅವರು ಕೊಡಗಿನಲ್ಲಿ ನಡೆದ ಕೆರೆಗಳ ಭೂಮಾಪನಾ ಕಾರ್ಯದ ಕುರಿತು ನೀಡಿದ ವಿವರ ಮಾಹಿತಿ ಈ ಕೆಳಗಿನಂತಿದೆ:-
ಜಿಲ್ಲೆಯಲ್ಲಿ ೫೪೭ ಕೆರೆಗಳ ಪೈಕಿ ಮಡಿಕೇರಿ ತಾಲೂಕಿನಲ್ಲಿ ೭೪, ಸೋಮವಾರಪೇಟೆ ತಾಲೂಕಿನಲ್ಲಿ ೨೦೮ ಹಾಗೂ ವೀರಾಜಪೇಟೆ ತಾಲೂಕಿನಲ್ಲಿ ೨೬೫ ಕೆರೆಗಳಿವೆ. ಇವುಗಳೆಲ್ಲಾ ಚಿಕ್ಕ ಕೆರೆಗಳಾಗಿವೆ. ಒಟ್ಟು ವಿಸ್ತೀರ್ಣ ೪೨೬.೬೧ ಎಕರೆ. ಇನ್ನುಳಿದಂತೆ ನೀರಾವರಿ ಇಲಾಖೆಯ ಅಧೀನದಲ್ಲಿ ಬೃಹತ್ ಕೆರೆಗಳಿದ್ದು, ಅವುಗಳ ಭೂಮಾಪನಾ ಕಾರ್ಯ ಕೈಗೊಂಡಿಲ್ಲ. ಪ್ರಸ್ತುತ ಜಿಲ್ಲೆಯ ಗ್ರಾಮಾಂತರ ವಿಭಾಗ ಹಾಗೂ ಪಟ್ಟಣ ವಿಭಾಗಗಳಲ್ಲಿ ಸರ್ವೆ ಕಾರ್ಯ ನಡೆಸಲಾಗಿದೆ. ಪಟ್ಟಣ ಪ್ರದೇಶಗಳಲ್ಲಿ ೧೧ ಕೆರೆಗಳಿವೆ. ಮಡಿಕೇರಿ ನಗರದಲ್ಲಿ ೪, ವೀರಾಜಪೇಟೆಯಲ್ಲಿ ೪, ಕುಶಾಲನಗರದಲ್ಲಿ ೨ ಹಾಗೂ ಸೋಮವಾರಪೇಟೆಯಲ್ಲಿ ೧ ಕೆರೆಗಳಿವೆ.
ಇದೀಗ ೫೦೯ ಕೆರೆಗಳ ಭೂಮಾಪನಾ ಕಾರ್ಯ ಮುಕ್ತಾಯಗೊಂಡಿದೆ. ಆ ಪೈಕಿ ಮಡಿಕೇರಿ ತಾಲೂಕಿನಲ್ಲಿ ೧೫, ಸೋಮವಾರಪೇಟೆ ತಾಲೂಕಿನಲ್ಲಿ ೭೦ ಹಾಗೂ ವೀರಾಜಪೇಟೆ ತಾಲೂಕಿನಲ್ಲಿ ೧೮ ಕೆರೆಗಳ ಜಾಗಗಳನ್ನು ಅತಿಕ್ರಮಣ ಮಾಡಿರುವುದು ಸ್ಪಷ್ಟಗೊಂಡಿದೆ. ಸುಮಾರು ೬೦.೧೨ ಎಕರೆ ವಿಸ್ತೀರ್ಣ ಪ್ರದೇಶ ಒತ್ತುವರಿಯಾಗಿದೆ. ಈ ಪೈಕಿ ಕಂದಾಯ ಇಲಾಖೆಯು ಈಗಾಗಲೇ ಮಡಿಕೇರಿ ತಾಲೂಕಿನಲ್ಲಿ ೧.೬ ಎಕರೆ ವಿಸ್ತೀರ್ಣದಲ್ಲಿನ ೯ ಕೆರೆಗಳು, ಸೋಮವಾರಪೇಟೆ ತಾಲೂಕಿನಲ್ಲಿ ೩೨.೦೯ ಎಕರೆ ವಿಸ್ತೀರ್ಣ ಪ್ರದೇಶದಲ್ಲಿನ ೫೧ ಕೆರೆಗಳು ಹಾಗೂ ವೀರಾಜಪೇಟೆ ತಾಲೂಕಿನಲ್ಲಿ ೪.೦೯ ಎಕರೆ ವಿಸ್ತೀರ್ಣದಲ್ಲಿರುವ ೧೨ ಕೆರೆಗಳು ಹೀಗೆ ಒಟ್ಟು ೩೭.೨೪ ಎಕರೆ ವಿಸ್ತೀರ್ಣದಲ್ಲಿನ ೭೨ ಕೆರೆಗಳ ಜಾಗಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ ಸರಕಾರದ ವಶಕ್ಕೆ ಪಡೆಯಲಾಗಿದೆ. ಮುಂದೆ ಈ ಕೆರೆಗಳ ಜೀರ್ಣೋದ್ಧಾರ, ಸಂರಕ್ಷಣೆ ಮಾಡುವ ಕಾರ್ಯ ನಡೆಯಲಿದೆ. ನಗರ ಮಟ್ಟದಲ್ಲಿ ವಶಪಡಿಸಿಕೊಂಡ ಕೆರೆಗಳನ್ನು ಆಯಾ ಸ್ಥಳೀಯ ಸಂಸ್ಥೆಗಳ ವಶಕ್ಕೆ ಒಪ್ಪಿಸಲಾಗುತ್ತದೆ. ಗ್ರಾಮೀಣ ಮಟ್ಟಗಳಲ್ಲಿ ವಶಪಡಿಸಿಕೊಂಡ ಕೆರೆಗಳನ್ನು ಲೋಕೋಪಯೋಗಿ ಇಲಾಖೆಯ ವಶಕ್ಕೆ ನೀಡಲಾಗುತ್ತದೆ.
ಕುಶಾಲನಗರ ಮತ್ತು ಸೋಮವಾರಪೇಟೆ ತಾಲೂಕಿನ ಕೆಲವೆಡೆ ಕಟ್ಟಡಗಳ ನಿರ್ಮಾಣ ಮುಂತಾದ ಕಾರ್ಯಗಳಿಂದ ಮಾಯವಾಗಿರುವ ಕೆರೆಗಳ ಜಾಗಗಳನ್ನು ಆಳವಾಗಿ ಅಧ್ಯಯನ ಮಾಡಿ, ಪರಿಶೀಲಿಸಿ ಬಳಿಕ ಭೂಮಾಪನಾ ಕಾರ್ಯವನ್ನು ನಿರ್ವಹಿಸಲಾಗುತ್ತದೆ ಎಂದು ಶ್ರೀನಿವಾಸ್ ಮಾಹಿತಿಯಿತ್ತರು.