ಗೋಣಿಕೊಪ್ಪ ವರದಿ, ಮಾ.೬: ಯುಪಿಎಸ್ಸಿ ಪರೀಕ್ಷೆ ಎದುರಿಸಲು ಕಲಾ ವಿಭಾಗದ ಶಿಕ್ಷಣ ಹೆಚ್ಚು ಪ್ರಯೋಜನಕ್ಕೆ ಬರುವುದರಿಂದ ಕಲಾ ವಿಭಾಗದ ಶಿಕ್ಷಣ ಕಡೆಗಣನೆ ಮಾಡಬೇಡಿ ಎಂದು ನಿವೃತ್ತ ಉಪನ್ಯಾಸಕಿ ಕಳ್ಳಿಚಂಡ ಅಕ್ಕಮ್ಮ ಸಲಹೆ ನೀಡಿದರು.
ಕಾವೇರಿ ಕಾಲೇಜು ವತಿಯಿಂದ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಲಾವೈಭವ ಹಬ್ಬ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಕಲಾ ವಿಭಾಗ ಸೇರಲು ವಿದ್ಯಾರ್ಥಿಗಳಲ್ಲಿ ನಿರಾಸಕ್ತಿ ಹೆಚ್ಚಾಗಿದೆ. ಐಪಿಎಸ್, ಐಎಎಸ್ ಹುದ್ದೆ ಪಡೆಯಲು ಸಾಕಷ್ಟು ಪರೀಕ್ಷೆ ಎದುರಿಸಬೇಕಿದೆ. ಇದರಲ್ಲಿ ಕಲಾ ವಿಭಾಗದಲ್ಲಿ ಕಲಿತ ರಾಜ್ಯಶಾಸ್ತç, ಅರ್ಥಶಾಸ್ತç ಸೇರಿದಂತೆ ಸಾಕಷ್ಟು ಸಾಮಾನ್ಯ ಜ್ಞಾನ ಇರುವ ಪ್ರಶ್ನೆಗಳು ಇರುತ್ತವೆ. ಪರೀಕ್ಷೆ ಎದುರಿಸಲು ಕಲಾ ವಿಭಾಗ ತುಂಬಾ ಪ್ರಯೋಜನಕ್ಕೆ ಬರುತ್ತದೆ. ಕಲಾ ವಿಭಾಗದ ವಿದ್ಯಾರ್ಥಿಗಳು ದೇಶದಲ್ಲಿ ಸಾಕಷ್ಟು ಕ್ಷೇತ್ರಗಳಲ್ಲಿ ಉನ್ನತ ಸ್ಥಾನ ಪಡೆದಿದ್ದಾರೆ. ಇದನ್ನು ಗಮನದಲ್ಲಿಟ್ಟು ಕೊಂಡು ಕಲಾ ಶಿಕ್ಷಣಕ್ಕೂ ಒತ್ತು ನೀಡಬೇಕು ಎಂದರು.
ಕಾವೇರಿ ಎಜುಕೇಷನ್ ಸೊಸೈಟಿ ನಿರ್ದೇಶಕ ಕೆ. ಪಿ. ಬೋಪಣ್ಣ ಮಾತನಾಡಿ, ಕಲಾ ವಿಭಾಗವನ್ನು ಕಡಿಮೆಯಾಗಿ ಕಾಣುವುದು ಸರಿಯಲ್ಲ. ವಿಜ್ಞಾನ, ಲೆಕ್ಕ ಶಾಸ್ತçಕ್ಕಿಂತ ಮಿಗಿಲಾಗಿದೆ ಎಂದರು.
ನಟನೆ, ಜಾನಪದ ನೃತ್ಯ, ಚಿತ್ರಕಲೆ, ಹಾಡುಗಾರಿಕೆ, ನಿಧಿ ಶೋಧನೆ ಸ್ಪರ್ಧೆಗಳು ನಡೆದವು.
ಪ್ರಾಂಶುಪಾಲ ಮಾಳೇಟೀರ ಬಿ. ಕಾವೇರಪ್ಪ, ಆಂತರಿಕ ಗುಣಾತ್ಮಕ ಭರವಸೆ ಸಮಿತಿ ಅಧ್ಯಕ್ಷೆ ಕುಪ್ಪಣಮಾಡ ಭಾರತಿ, ಉಪ ಪ್ರಾಂಶುಪಾಲ ಡಾ. ಎ. ಎಸ್. ಪೂವಮ್ಮ, ವಿದ್ಯಾರ್ಥಿ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷೆ ಡಾ. ರೇವತಿ ಪೂವಯ್ಯ ಇದ್ದರು.