ಕುಶಾಲನಗರ, ಮಾ. ೬: ಮಹಾಶಿವರಾತ್ರಿ ಅಂಗವಾಗಿ ಇಲ್ಲಿನ ಶರತ್ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕಾಫಿ ಅರುಣ್ ನೇತೃತ್ವದ ತಂಡ ವಿಜಯಿಯಾಗುವ ಮೂಲಕ ಶಿವರಾತ್ರಿ ಕಪ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿತು. ಎರಡನೇ ಬಹುಮಾನವನ್ನು ಕಾಫಿ ವ್ಯಾಪಾರಿ ಆನಂದ್ ನೇತೃತ್ವದ ತಂಡ ಪಡೆದುಕೊಂಡಿತು.
ಪAದ್ಯಾವಳಿಯನ್ನು ಉದ್ಘಾಟಿಸಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ ಮಾತನಾಡಿ, ಕ್ರೀಡೆಗಳು ಪರಸ್ಪರ ಸ್ನೇಹವನ್ನು ಬೆಸೆಯುವಲ್ಲಿ ಸಹಕಾರಿಯಾಗಿವೆ. ಪಂದ್ಯಾವಳಿಗಳು ಹೆಚ್ಚು ಹೆಚ್ಚು ನಡೆದಷ್ಟು ಆಟಗಾರರಲ್ಲಿ ಕ್ರೀಡಾ ಕೌಶಲ್ಯ ಹೆಚ್ಚಳವಾಗುತ್ತದೆ ಎಂದರು.
ಪಿರಿಯಾಪಟ್ಟಣದ ಸರ್ಕಾರಿ ಪದವಿ ಕಾಲೇಜು ಪ್ರಾಂಶುಪಾಲ ದೇವರಾಜು, ವಾಲ್ನೂರು ಗ್ರಾಮ ಪಂಚಾಯಿತಿ ಪಿಡಿಒ ಲೋಕೇಶ್ ಮಾತನಾಡಿದರು.
ಬೈಲಕೊಪ್ಪ ಪೊಲೀಸ್ ಠಾಣೆಯ ಎಎಸ್ ಐ ಲೋಕೇಶ್, ಕುಶಾಲನಗರ ಠಾಣೆಯ ಎಎಸ್ಐ ಮಂಜುನಾಥ, ಕಾಫಿ ಉದ್ಯಮಿ ನವೀನ್, ವಕೀಲ ಶರತ್, ಶಿಕ್ಷಕ ನಿರಂಜನ್ ಮೊದಲಾದವರಿದ್ದರು. ಇದೇ ಸಂದರ್ಭ ಕೆ.ಎಸ್.ಮೂರ್ತಿ ಅವರನ್ನು ಸನ್ಮಾನಿಸಲಾಯಿತು.