ಮಡಿಕೇರಿ, ಮಾ.೫ : ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅಂಬೆಕಲ್ ನವೀನ್ಕುಶಾಲಪ್ಪ ಅಧಿಕಾರಿ ಸ್ವೀಕಾರ ಮಾಡಿದರು. ನಗರದ ಲಯನ್ಸ್ ಸಂಸ್ಥೆಯ ಸಭಾಂಗಣದಲ್ಲಿ ನಿಕಟಪೂರ್ವ ಅಧ್ಯಕ್ಷ ಕುಡೆಕಲ್ ಸಂತೋಷ್ ಅವರಿಂದ ಅಧಿಕಾರ ಸ್ವೀಕರಿಸಿದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಹಿರಿಯ ವಕೀಲ ಎಂ.ಎ. ನಿರಂಜನ್ ಅವರು ಪ್ರಸ್ತುತ ದಿನಗಳಲ್ಲಿ ಭಾಷೆಯೊಂದಿಗೆ ಸಂಸ್ಕೃತಿಯು ನಶಿಸಿ ಹೋಗುತ್ತಿದ್ದು, ಮಕ್ಕಳು ಓದುವ ಪ್ರವೃತ್ತಿಯನ್ನು ಬೆಳೆಸಿಕೊಂಡಾಗ ಮಾತ್ರ ಕನ್ನಡ ಭಾಷೆ ಮತ್ತು ಸಾಹಿತ್ಯ ಕ್ಷೇತ್ರ ಉತ್ತಮ ರೀತಿಯಲ್ಲಿ ಬೆಳವಣಿಗೆ ಸಾಧಿಸಲು ಸಾಧ್ಯವೆಂದು ಅಭಿಪ್ರಾಯಪಟ್ಟರು.
ಸಂಘಟನೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳುವವರಿಗೆ ಸಾಹಿತ್ಯ ಜ್ಞಾನ ಮುಖ್ಯ, ಉತ್ತಮ ಆಡಳಿತಗಾರನಾಗಿರಬೇಕು; ಅಲ್ಲದೆ ಸಂಘಟನೆಯನ್ನು ನಡೆಸುವ ಶಕ್ತಿ ಹೊಂದಿರಬೇಕು ಎಂದರು.
ಯುವ ಸಮೂಹದಲ್ಲಿ ಸಾಹಿತ್ಯಾಸಕ್ತಿಯನ್ನು ಮೂಡಿಸುವ ಅಗತ್ಯವಿದೆ. ಪ್ರಸ್ತುತ ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆಯಾಗಿದೆ. ವಿದ್ಯಾರ್ಥಿಗಳು ಶಾಲಾ-ಕಾಲೇಜು ಮಟ್ಟದಿಂದಲೇ ಸಾಹಿತ್ಯದ ಮೇಲೆ ಪ್ರೀತಿ ತೋರಬೇಕು. ಶ್ರೇಷ್ಠ ಸಾಹಿತಿಗಳ ಕೃತಿಯನ್ನು ಓದುವ ಕಾಳಜಿ ತೋರಬೇಕು. ಕನ್ನಡದ ಜೊತೆಗೆ ಆಂಗ್ಲ ಭಾಷೆಯ ಜ್ಞಾನವು ಮುಖ್ಯ. ಪ್ರಸ್ತುತ ದಿನಗಳಲ್ಲಿ ಕನ್ನಡ ಸರ್ಕಾರಿ ಕಚೇರಿಗಳಿಗೆ ಮಾತ್ರ ಸೀಮಿತವಾಗಿದೆ. ಕನ್ನಡ ಭಾಷೆ ಬಲ್ಲವರಿಗೆ ಖಾಸಗಿ ವಲಯದಲ್ಲಿ ಎಷ್ಟರ ಮಟ್ಟಿಗೆ ಅವಕಾಶಗಳು ದೊರೆಯುತ್ತಿವೆ ಎಂಬುದರ ಬಗ್ಗೆ ಸಾಹಿತ್ಯ ಪರಿಷತ್ತು ಅರಿತುಕೊಳ್ಳಬೇಕಾಗಿದೆ. ಶಾಲಾ, ಕಾಲೇಜು ಮಟ್ಟದಲ್ಲೇ ಇದರ ಬಗ್ಗೆ ಚರ್ಚೆ ಆಗಬೇಕಿದೆ, ಕನ್ನಡಕ್ಕೆ ಸಂಬAಧಿಸಿದAತೆ ಕ್ಲಬ್ಗಳು ತೆರೆಯುವಂತಾಗಬೇಕು, ಸಾಹಿತ್ಯ ಕ್ಷೇತ್ರಕ್ಕೆ ರಾಜಕೀಯ ನುಸಳದಂತೆ ಎಚ್ಚರ ವಹಿಸಬೇಕೆಂದು ನಿರಂಜನ್ ಸಲಹೆ ನೀಡಿದರು. ನವೀನ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿ ಮಾತನಾಡಿದ ನಿಕಟಪೂರ್ವ ಅಧ್ಯಕ್ಷ ಸಂತೋಷ್; ಬೇರೆ ಸಂಘ-ಸAಸ್ಥೆಗಳಿಗೆ ಹೋಲಿಕೆ ಮಾಡಿದರೆ, ಸಾಹಿತ್ಯ ಕ್ಷೇತ್ರದಲ್ಲಿನ ಸೇವೆ ಆತ್ಮತೃಪ್ತಿ ನೀಡುತ್ತದೆ. ಇಲ್ಲಿ ಎಲ್ಲರೂ ಒಂದಾಗಿ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುವ ಉತ್ತಮ ಕಾರ್ಯ ಆಗುತ್ತದೆ ಎಂದರು. ಐದು ವರ್ಷದ ಅಧಿಕಾರವಧಿಯಲ್ಲಿ ಸಹಕಾರ ನೀಡಿದವರನ್ನು ಸ್ಮರಿಸಿಕೊಂಡರಲ್ಲದೆ, ಮುಂದೆಯೂ ಪರಿಷತ್ತಿನ ಕಾರ್ಯ ಚಟುವಟಿಕೆಗಳಿಗೆ ಸಹಕಾರ ನೀಡುವುದಾಗಿ ಹೇಳಿದರು.
ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧನೆ ಮಾಡಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಪರಿಷತ್ತಿನ ಸದಸ್ಯತ್ವವನ್ನು ೧೦ ಸಾವಿರಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ. ಕನ್ನಡ ಭವನ ನಿರ್ಮಾಣ ಮಾಡುವ ನಿಟ್ಟಿನಲ್ಲಿ ತಮ್ಮ ಅವಧಿಯಲ್ಲಿ ರೂ.೧೦ ಲಕ್ಷ ಹಣವನ್ನು ಠೇವಣಿಯಾಗಿ ಇರಿಸಲಾಗಿದ್ದು, ಶೀಘ್ರ ಭವನ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.
ದತ್ತಿ ನಿಧಿಗಳನ್ನು ಹೆಚ್ಚು ಸ್ಥಾಪನೆ ಮಾಡುವ ಮೂಲಕ ಯುವ ಜನಾಂಗದಲ್ಲಿ ಸಾಹಿತ್ಯಾಭಿರುಚಿಯನ್ನು ಹೆಚ್ಚಿಸುವ ಕಾರ್ಯವಾಗಬೇಕು. ಶಿಕ್ಷಕರು ಸಾಹಿತ್ಯ ಕ್ಷೇತ್ರದಲ್ಲಿ ಪ್ರಮುಖ ರೂವಾರಿಗಳಾಗಿದ್ದು, ಶಿಕ್ಷಕರ ಸಮ್ಮೇಳನ, ವಿದ್ಯಾರ್ಥಿ ಬಳಗವನ್ನೊಳಗೊಂಡ ವಿನೂತನ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂದರು.
ಐದು ತಾಲೂಕಿನ ಅಧ್ಯಕ್ಷರ ಪದಗ್ರಹಣದ ನಂತರ ಎಲ್ಲಾ ಪದಾಧಿಕಾರಿಗಳಿಗೆ ಒಂದು ದಿನದ ಕಾರ್ಯಾಗಾರ ಏರ್ಪಡಿಸಿ ಸಂಘಟನೆಯ ಬೆಳವಣಿಗೆಗೆ ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಪ್ರತಿಜ್ಞಾವಿಧಿ ಸ್ವೀಕರಿಸಿ ಮಾತನಾಡಿದ ಮಡಿಕೇರಿ ತಾಲೂಕು ಅಧ್ಯಕ್ಷ ನವೀನ್ ಅಂಬೆಕಲ್ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿ ಸದಸ್ಯತ್ವದ ಮೊತ್ತವನ್ನು ರೂ.೫೦೦ ರಿಂದ ೨೦೦ಕ್ಕೆ ಇಳಿಕೆ ಮಾಡಲಾಗಿದೆ. ಸಾಹಿತ್ಯಾಭಿಮಾನಿಗಳು ಪರಿಷತ್ತಿನ ಸದಸ್ಯತ್ವ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಪಾ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ಕನ್ನಡ ಅನ್ನದ ಭಾಷೆಯಾಗಿ ಬೆಳೆಯಬೇಕು, ಆ ನಿಟ್ಟಿನಲ್ಲಿ ಮುಂದಿನ ಐದು ವರ್ಷಗಳ ಕಾಲ ಅವಿರತ ಶ್ರಮದೊಂದಿಗೆ ಹೊಸ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಭಾಷೆಯನ್ನು ಬಳಸಿದರೆ ಮಾತ್ರ ಬೆಳೆಯುತ್ತದೆ, ಇಂದಿನ ತಂತ್ರಾAಶವನ್ನು ಬೆಳಸಿಕೊಂಡು ಯುವ ಸಮೂಹವನ್ನು ಗಮದಲ್ಲಿಟ್ಟುಕೊಂಡು ಉತ್ತಮ ಕಾರ್ಯಕ್ರಮಗಳನ್ನು ನೀಡಲಾಗುವುದು.
ಸಾಹಿತ್ಯ ಪರಿಷತ್ತಿನ ಭವನ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದೆಂದರು.
ಕ.ಸಾ.ಪ ಗೌರವ ಕಾರ್ಯದರ್ಶಿ ಮುನೀರ್ ಅಹಮ್ಮದ್, ಕುಶಾಲನಗರ ಅಧ್ಯಕ್ಷ ಕೆ.ಎಸ್.ಮೂರ್ತಿ, ಸೋಮವಾರಪೇಟೆ ಅಧ್ಯಕ್ಷ ಎಸ್.ಡಿ.ವಿಜೇತ, ವೀರಾಜಪೇಟೆ ಅಧ್ಯಕ್ಷ ಡಿ.ರಾಜೇಶ್ ಪದ್ಮನಾಭ ನೂತನ ಆಡಳಿತ ಮಂಡಳಿಗೆ ಶುಭ ಹಾರೈಸಿದರು. ಪುದಿಯನೆರವನ ರೇವತಿ ರಮೇಶ್, ಕೋಶಾಧಿಕಾರಿ ಮಂಡುವAಡ ಜೋಯಪ್ಪ, ಕ.ಸಾ.ಪ. ಪದಾಧಿಕಾರಿ, ಮತ್ತಿತರರು ಉಪಸ್ಥಿತರಿದ್ದರು.
ಕ.ಸಾ.ಪ. ಪದಾಧಿಕಾರಿ ಹೆಚ್.ಟಿ.ಅನಿಲ್ ಸ್ವಾಗತಿಸಿದರು, ಉಪನ್ಯಾಸಕಿ ಜಯಲಕ್ಷಿö್ಮ ನಿರೂಪಿಸಿದರು. ವಿದ್ಯಾರ್ಥಿನಿಯರಾದ ಸ್ನೇಹ, ಸ್ವಪ್ನ ಪ್ರಾರ್ಥಿಸಿದರು. ತಾಲೂಕು ಗೌರವ ಕಾರ್ಯದರ್ಶಿ ಪ್ರತಿಮಾ ಹರೀಶ್ ರೈ ಅವರು ವಕೀಲ ನಿರಂಜನ್ ಅವರ ಪರಿಚಯ ಮಾಡಿದರು. ನೂತನ ಅಧ್ಯಕ್ಷ ಅಂಬೆಕಲ್ ನವೀನ್ ಅವರ ಪರಿಚಯವನ್ನು ವಿಶೇಷ ಆಹ್ವಾನಿತರಾದ ಪೂರ್ಣಿಮಾ ಜೋಶಿ, ಕಡ್ಲೆರ ತುಳಸಿ ಮೋಹನ್, ಜಿಲ್ಲಾಧ್ಯಕ್ಷ ಕೇಶವ ಕಾಮತ್ ಅವರು ಪರಿಚಯ ಮಾಡಿದರು.
ಅಗಲಿದ ಕಸಾಪ ಸದಸ್ಯರುಗಳಿಗೆ ಕಾರ್ಯಕ್ರಮದಲ್ಲಿ ಸಂತಾಪ ಸೂಚಿಸಲಾಯಿತು. ಗೌರವ ಕಾರ್ಯದರ್ಶಿ ಕೆ.ಯು. ರಂಜಿತ್ ವಂದಿಸಿದರು.