ಮಡಿಕೇರಿ, ಮಾ. ೬ : ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆ.ಎಸ್.ಸಿ.ಎ.) ಮೂಲಕ ಜಿಲ್ಲೆಯ ಹೊದ್ದೂರು ಗ್ರಾ.ಪಂ ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿರುವ ಕ್ರಿಕೆಟ್ ಸ್ಟೇಡಿಯಂ ಕುರಿತಾಗಿ ಇದೀಗ ಮತ್ತೊಂದು ಶುಭ ಸೂಚನೆ ದೊರೆತಿದೆ. ಸ್ಟೇಡಿಯಂ ನಿರ್ಮಾಣಕ್ಕೆ ಎಂದು ಜಿಲ್ಲಾಡಳಿತದ ಮೂಲಕ ಗುರುತಿಸಲ್ಪಟ್ಟು ಸರಕಾರದ ಒಪ್ಪಿಗೆಯೊಂದಿಗೆ ನಿಗದಿ ಮಾಡಿರುವ ೧೧.೭೦ ಎಕರೆ ಜಾಗದಲ್ಲಿ ಸ್ಟೇಡಿಯಂ ನಿರ್ಮಾಣಕ್ಕೆ ಈ ಜಾಗ ಸೂಕ್ತವಿದೆಯೋ ಎಂಬ ಕುರಿತಾಗಿ ಕೆ.ಎಸ್.ಸಿ.ಎ. ಇಂಜಿನಿಯರಿAಗ್ ವಿಭಾಗದ ಮೂಲಕ ನಡೆಸಲಾದ ಮಣ್ಣು ಪರೀಕ್ಷಾ ವರದಿ ಇದೀಗ ಲಭ್ಯವಾಗಿದ್ದು, ಈ ಜಾಗ ಸೂಕ್ತವಾಗಿದೆ ಎಂದು ದೃಢೀಕರಿಸಲಾಗಿದೆ. ಇತ್ತೀಚೆಗೆ ಕೆ.ಎಸ್.ಸಿ.ಎ. ಇಂಜಿನಿಯರಿAಗ್ ವಿಭಾಗದ ಮೂಲಕ ಈ ಜಾಗದ ಮಣ್ಣನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಕೊಯಮತ್ತೂರಿಗೆ ಕಳುಹಿಸಲಾಗಿತ್ತು. ಸ್ಯಾಂಡ್ ಅಂಡ್ ಸ್ಟೋನ್ ಕನ್ಸ್ಟ್ರಕ್ಷನ್ ಮೂಲಕ ಕೊಯಮತ್ತೂರಿನ ಜಿಯೋ ಟೆಕ್ನಿಕಲ್ ಟೀಮ್ ಮಣ್ಣು ಪರೀಕ್ಷೆ ನಡೆಸಿದ್ದು ಗುರುತಿಸಲ್ಪಟ್ಟಿರುವ ಜಾಗ ಸ್ಟೇಡಿಯಂ ನಿರ್ಮಾಣಕ್ಕೆ ಸೂಕ್ತವಾಗಿದೆ ಎಂದು ಪರಿಗಣಿಸಲ್ಪಟ್ಟಿದೆ. ಇದನ್ನು ಮಣ್ಣು ಪರೀಕ್ಷಾ ವಿಭಾಗದ ಪ್ರಮುಖರಾದ ದೀಪಕ್ ಅವರು ಖಚಿತಪಡಿಸಿದ್ದಾರೆ.

ಕೆಲ ದಿನಗಳ ಹಿಂದೆ ಈ ವರದಿ ಕೆ.ಎಸ್.ಸಿ.ಎ. ಕೈ ಸೇರಿದ್ದು ಇದೀಗ ಉದ್ದೇಶಿತ ಸ್ಥಳದಲ್ಲಿ ತ್ವರಿತ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಪ್ರಸ್ತುತ ತಡೆಗೋಡೆ ನಿರ್ಮಾಣ, ಜಾಗದ ಸುತ್ತಲೂ ಬೇಲಿ ಅಳವಡಿಕೆ, ಕೆಲಸ ಆರಂಭಗೊAಡಿದೆ. ಜಿಲ್ಲಾಡಳಿತ ನಿಗದಿಪಡಿಸಿರುವ ಜಾಗದ ಸುತ್ತಲಿನ ಕೆಲವೊಂದು ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ತಡೆಗೋಡೆ ಹಾಗೂ ಬೇಲಿ ನಿರ್ಮಾಣದ ಬಳಿಕ ಮಳೆಗಾಲದ ಒಳಗೆ ಮಣ್ಣನ್ನು ಸಮತಟ್ಟುಗೊಳಿಸುವ ಕೆಲಸವೂ ಆರಂಭಗೊಳ್ಳಲಿದೆ ಎಂದು ಕೆ.ಎಸ್.ಸಿ.ಎ. ಸಂಯೋಜಕರಾಗಿರುವ ಚೇನಂಡ ಪ್ರಥ್ವಿ ದೇವಯ್ಯ ಅವರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.

ಸದ್ಯದಲ್ಲಿ ಪ್ರಮುಖರ ಭೇಟಿ : ಅಂದಾಜು ರೂ. ೫೦ ಕೋಟಿ ವೆಚ್ಚದಲ್ಲಿ ಕ್ರಿಕೆಟ್ ಸ್ಟೇಡಿಯಂ ತಲೆ ಎತ್ತಲಿದ್ದು, ಅಂರ‍್ರಾಷ್ಟಿçÃಯ ಗುಣಮಟ್ಟದಲ್ಲಿ ನಿರ್ಮಾಣವಾಗಲಿದೆ. ಈ ಸ್ಥಳಕ್ಕೆ ಸದ್ಯದಲ್ಲಿ ಬಿಸಿಸಿಎ ಪ್ರಮುಖ ಐ.ಪಿ.ಎಲ್. ಪ್ರೆಸಿಡೆಂಟ್ ಬ್ರಿಜೇಶ್ ಪಟೇಲ್, ಕೆ.ಎಸ್.ಸಿ.ಎ. ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಸಂತೋಷ್ ಮೆನನ್, ಖಜಾಂಚಿ ವಿನಯ್ ಮೃತ್ಯುಂಜಯ, ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಉಸ್ತುವಾರಿ ಶಾಂತಿ ಸ್ವರೂಪ್ ಮತ್ತಿತರರು ಶಿಲ್ಪ ತಜ್ಞರು (ಆರ್ಕಿಟೆಕ್ಟ್) ಇಂಜಿನಿಯರಿAಗ್ ವಿಭಾಗ, ಕಟ್ಟಡ ನಿರ್ಮಾಣ ವಿಭಾಗದ ಮುಖ್ಯಸ್ಥರೊಂದಿಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ.

ಶೀಘ್ರವಾದಷ್ಟು ಜನರಿಗೆ ಅನುಕೂಲ: ಡಿ.ಸಿ.

ಕ್ರಿಕೆಟ್ ಸ್ಟೇಡಿಯಂ ಕುರಿತಾದ ವಿಚಾರ ಹಲವು ವರ್ಷಗಳ ಹಿಂದಿನದ್ದು. ಇದೀಗ ಎಲ್ಲಾ ವಿವಾದಗಳು ಸರಿಯಾಗಿದ್ದು, ಕೆ.ಎಸ್.ಸಿ.ಎ.ಗೆ ಸರಕಾರದ ಆದೇಶದಂತೆ ಜಾಗ ನೀಡಲಾಗಿದೆ. ಕ್ರೀಡಾಂಗಣ ಬೇಗ ಆದಲ್ಲಿ ಜನತೆಗೆ ಹೆಚ್ಚು ಉಪಯೋಗವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಹೇಳಿದ್ದಾರೆ. ಸ್ಮಶಾನ ಜಾಗದ ಕುರಿತಾಗಿ ಇದ್ದ ವಿವಾದ ಬಗೆಹರಿಸಲಾಗಿದ್ದು, ಈಗಾಗಲೇ ಸ್ಮಶಾನಕ್ಕೆಂದು ಒಂದು ಎಕರೆಯನ್ನು ಪ್ರತ್ಯೇಕಿಸಿ ನೀಡಲಾಗಿದೆ. ಮತ್ತೊಂದು ಎಕರೆ ಬೇಕೆಂಬ ಅಲ್ಲಿನ ನಿವಾಸಿಗಳ ಬೇಡಿಕೆಯನ್ನು ಪರಿಶೀಲಿಸಲಾಗುತ್ತಿದ್ದು, ಅದೇ ಗ್ರಾಮದಲ್ಲಿ ಬೇರೆಡೆ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸ್ಟೇಡಿಯಂ ನಿರ್ಮಾಣ ಇನ್ನು ಕೆ.ಎಸ್.ಸಿ.ಎ.ಗೆ ಬಿಟ್ಟಿದ್ದು. ತ್ವರಿತವಾದಷ್ಟು ಅನುಕೂಲವಾಗಲಿದೆ. ಸದ್ಯಕ್ಕೆ ಯಾವುದೇ ತೊಂದರೆಗಳಿಲ್ಲ. ಎಲ್ಲವೂ ಇತ್ಯರ್ಥವಾಗಿದೆ. ಮೂರು ತಿಂಗಳಲ್ಲಿ ಮಳೆಗಾಲವೂ ಎದುರಾಗಲಿರುವುದರಿಂದ ಕೆಲಸ ತ್ವರಿತಗೊಳಿಸಲು ಸಂಸ್ಥೆಯೂ ಮುಂದೆ ಬಂದಿದೆ ಎಂದು ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿದರು.ಮತ್ತೆ ಸಭೆ

ಈ ಎಲ್ಲಾ ಬೆಳವಣಿಗೆಗಳ ನಡುವೆ ಪಾಲೇಮಾಡುವಿನ ಕೆಲವರ ಆಕ್ಷೇಪ ಹಾಗೂ ಮನವಿಯ ಹಿನ್ನೆಲೆಯಲ್ಲಿ ತಹಶೀಲ್ದಾರ್ ಸೂಚನೆಯಂತೆ ಹೊದ್ದೂರು ಗ್ರಾ.ಪಂ. ಮೂಲಕ ಕಳೆದೆರಡು ದಿನದ ಹಿಂದೆ ವಿಶೇಷ ಗ್ರಾಮಸಭೆಯೊಂದನ್ನು ನಡೆಸಲಾಗಿದೆ. ಈ ಸಭೆಯಲ್ಲಿ ಕಾವೇರಿದ ಚರ್ಚೆ ನಡೆದಿದ್ದು, ಪರ-ವಿರೋಧಗಳು ವ್ಯಕ್ತಗೊಂಡಿವೆ.

ಪಾಲೇಮಾಡು ಅಂಗನವಾಡಿ ಮುಂಭಾಗದಲ್ಲಿ ಪಂಚಾಯ್ತಿ ಅಧ್ಯಕ್ಷೆ ಕುಸುಮಾವತಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಕ್ರಿಕೆಟ್ ಸ್ಟೇಡಿಯಂ ಮತ್ತು ಸ್ಮಶಾನ ಜಾಗದ ಗೊಂದಲದ ಕುರಿತು ಪರ, ವಿರೋಧ ಹೇಳಿಕೆಗಳು ಕೇಳಿ ಬಂತು.

ಗ್ರಾಮಸ್ಥರಾದ ವಕೀಲ ಗಿರಿ ಉತ್ತಪ್ಪ ಮಾತನಾಡಿ ಅಂತರರಾಷ್ಟಿçÃಯ ಮಟ್ಟದ ಸ್ಟೇಡಿಯಂ ನಿರ್ಮಾಣಗೊಳ್ಳುತ್ತಿರುವುದು ಸಂತೋಷದ ವಿಚಾರ. ಸ್ಮಶಾನ ಜಾಗದ ವಿಚಾರ ಮುಂದಿಟ್ಟು ಯೋಜನೆಗೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲವೆಂದರು.

ಕ್ರಿಕೆಟ್ ಸ್ಟೇಡಿಯಂ ನಿರ್ಮಾಣದಿಂದ ಗ್ರಾಮ ಮಾತ್ರವಲ್ಲ ಜಿಲ್ಲೆ ಕೂಡ ಅಭಿವೃದ್ಧಿಯಾಗಲಿದ್ದು, ಸ್ಥಳೀಯ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಸಿಗಲಿದೆ. ಇಲ್ಲಿ ಸಾಕಷ್ಟು ಜಾಗ ಒತ್ತುವರಿಯಾಗಿದ್ದು, ಓರ್ವ ಫಲಾನುಭವಿಗೆ ಮೂರೂವರೆ ಸೆಂಟ್ ಜಾಗವೆಂದು ನಿಗದಿ ಮಾಡಿದ್ದರೂ ಹೆಚ್ಚಿನ ಜಾಗವನ್ನು ಹೊಂದಿದ್ದಾರೆ. ಸರ್ವೆ ನಡೆಸಿ ಎಲ್ಲಾ ಒತ್ತುವರಿಯನ್ನು ತೆರವುಗೊಳಿಸಿದರೆ ಸ್ಟೇಡಿಯಂ ನಿರ್ಮಾಣ ಸುಲಭವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಗ್ರಾ.ಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಮೊಣ್ಣಪ್ಪ ಮಾತನಾಡಿ ಸ್ಟೇಡಿಯಂ ಗೆ ನಾವು ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ, ೧೧೯ ಎಕರೆ ಒತ್ತುವರಿ ಜಾಗದ ಕುರಿತು ಹದ್ದು ಬಸ್ತ್ ಸರ್ವೆ ಕಾರ್ಯ ಆಗಬೇಕು. ಕಂದಾಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕಾಳಜಿ ವಹಿಸಬೇಕು ಎಂದು ಒತ್ತಾಯಿಸಿದರು.

ನಮ್ಮ ಪೂರ್ವಜರನ್ನು ಸಮಾಧಿ ಮಾಡಿದ ಜಾಗವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ಆಡಳಿತ ವ್ಯವಸ್ಥೆ ಬಡವರ ಪರವಾಗಿರಬೇಕೆ ಹೊರತು ಶ್ರೀಮಂತ ಸಂಸ್ಥೆಗಳ ಪರವಾಗಿ ಕೆಲಸ ಮಾಡಬಾರದು. ಸ್ಟೇಡಿಯಂ ನಿರ್ಮಾಣಕ್ಕೂ ಮೊದಲು ರಸ್ತೆ ವ್ಯವಸ್ಥೆಯನ್ನು ಸರಿಪಡಿಸಬೇಕೆಂದು ತಿಳಿಸಿದರು.

ಜಲಜೀವನ್ ಮಿಷನ್ ಯೋಜನೆಯ ಕುರಿತು ಸಂಯೋಜಕಿ ಬಿಂದು ಹಾಗೂ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಕುರಿತು ತಾಲೂಕು ಐ.ಇ.ಸಿ ಸಂಯೋಜಕಿ ಅಕ್ಷಿತಾ ಗ್ರಾಮಸ್ಥರಿಗೆ ವಿವರಿಸಿದರು.

ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಸ್ಮಶಾನಕ್ಕಾಗಿ ೨ ಎಕರೆ ಜಾಗವನ್ನು ಮೀಸಲಿಡಬೇಕು ಸೇರಿದಂತೆ ಕಂದಾಯ ಇಲಾಖೆಗೆ ಸಂಬAಧಿಸಿದ ವಿಚಾರಗಳು, ಅಂಗನವಾಡಿಗೆ ಕಟ್ಟಡ, ವಿದ್ಯುತ್ ಸಮಸ್ಯೆ, ವಸತಿ, ಜಲಜೀವನ್, ಉದ್ಯೋಗ ಖಾತ್ರಿ ಯೋಜನೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.

ಗ್ರಾ.ಪಂ ಅಧ್ಯಕ್ಷೆ ಕುಸುಮಾವತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಹಶೀಲ್ದಾರ್ ಗೈರು ಹಾಜರಾದ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.

ಪಿಡಿಒ ಅಬ್ದುಲ್ಲಾ, ಸದಸ್ಯರಾದ ಹಂಸ, ಮೊÊದು, ಚೌರಿರ ನವೀನ್, ಅನಿತ, ಕಡ್ಲೇರ ಟೈನಿ, ಹಮೀದ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಹೊದ್ದೂರು ಪಾಲೇಮಾಡು ಕಾನ್ಶಿರಾಂ ನಗರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ೨ ಎಕರೆ ಸ್ಮಶಾನ ಜಾಗವನ್ನು ಯಥಾಸ್ಥಿತಿ ಉಳಿಸಿಕೊಡಬೇಕು ಎಂದು ಒತ್ತಾಯಿಸಿ ಕೆ.ಮೊಣ್ಣಪ್ಪ ಅವರು ಇದೇ ಸಂದರ್ಭ ಗ್ರಾ.ಪಂ ಅಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಸಿದರು. ಬಡವರ ಹಕ್ಕನ್ನು ಶ್ರೀಮಂತ ಸಂಸ್ಥೆಗಳು ಕಸಿದುಕೊಳ್ಳದಂತೆ ನೋಡಿಕೊಳ್ಳಬೇಕೆಂದು ಕೋರಿಕೊಂಡರು.

ಸಭೆಯಲ್ಲಿ ನೆರವಂಡ ಅನೂಪ್ ಉತ್ತಯ್ಯ, ಚೌರೀರ ಸೋಮಣ್ಣ, ನಿರನ್ ಮಂದಣ್ಣ, ಶ್ಯಾಮ್ ಗಣಪತಿ, ಮೇಕಂಡ ಸುನಿಲ್, ಚೆಟ್ಟಿಮಾಡ ಲೋಕೇಶ್, ಸುನಿಲ್ ಮತ್ತಿತರರು ಪಾಲ್ಗೊಂಡಿದ್ದರು.