ಮೈಸೂರು, ಮಾ. ೫: ಸಾವಿರಾರು ಮೈಲುಗಳ ದೂರದಿಂದ ಬಂದು ಭಾರತದಲ್ಲಿ ಆಶ್ರಯ ಪಡೆದು ಬದುಕು ಕಟ್ಟಿಕೊಂಡಿರುವ ಟಿಬೇಟಿಯನ್ನರದು ವೈವಿದ್ಯಮಯ ಬದುಕು. ವಿವಿಧ ಆಚರಣೆಗಳೊಂದಿಗೆ ತಮ್ಮ ಹೊಸ ವರ್ಷವನ್ನೂ ಅವರು ಸಂಭ್ರಮ ಸಡಗರದಿಂದ ಆಚರಿಸುತ್ತಾರೆ.

ಜಿಲ್ಲೆಯ ಪಕ್ಕದ ಬೈಲಕುಪ್ಪೆ ಸಾವಿರಾರು ಟಿಬೇಟಿಯನ್ನರ ಆಶ್ರಯತಾಣವಾಗಿದ್ದು ಹಿಮಾಚಲ ಪ್ರದೇಶದ ಧರ್ಮಶಾಲ ನಂತರ ದೇಶದ ಎರಡನೇ ಅತೀ ಹೆಚ್ಚು ಸಂಖ್ಯೆಯ ಟಿಬೇಟಿಯನ್ನರು ಇಲ್ಲಿ ವಾಸಿಸುತ್ತಿದ್ದಾರೆ.

ಬೌದ್ದ ಧರ್ಮವನ್ನು ಪಾಲಿಸುವ ಟಿಬೇಟಿಯನ್ನರು ಮತ್ತು ಲಡಾಖ್ ಪ್ರದೇಶದ ಜನರೂ ಲೋಸಾರ್ ಹಬ್ಬವನ್ನು ಆಚರಿಸುತ್ತಾರೆ. ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಆಚರಿಸಲಾಗುವ ಈ ಹಬ್ಬವನ್ನು ೧೫ ದಿನಗಳ ಕಾಲ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಸ್ಥಳೀಯ ಜಲಮೂಲಗಳಿಗೆ ಪೂಜೆ ಸಲ್ಲಿಸುವ ಸಂಪ್ರದಾಯವೂ ಇದೆ. ಈ ವರ್ಷ ಮಾರ್ಚ್ ೩ರ ಗುರುವಾರ ಆರಂಭಗೊAಡಿರುವ ಹಬ್ಬ ತಾ. ೧೮ರ ವರೆಗೆ ಅಂದರೆ ಮುಂದಿನ ಹುಣ್ಣಿಮೆವರೆಗೆ ನಡೆಯಲಿದೆ. ಟಿಬೇಟಿಯನ್ನರು ಹೊಸ ವರ್ಷವನ್ನು ಸ್ವಾಗತಿಸುವ ಮುನ್ನ ಗೂತೂರ್ ಹೆಸರಿನ ಆಚರಣೆಯನ್ನು ಆಚರಿಸುವ ಸಂಪ್ರದಾಯವಿದೆ. ಗೂತೂರ್ ಆಚರಣೆಯ ಮೂಲಕ ದುಷ್ಟ ಶಕ್ತಿಗಳನ್ನು ನಿಗ್ರಹಿಸಲಾಗುತ್ತದೆ. ಈ ಆಚರಣೆ ನಡೆಸಲಾಗಿದ್ದು ಇದಕ್ಕಾಗಿ ಬೌದ್ದ ಸನ್ಯಾಸಿಗಳಿಂದ ದಿನವಿಡಿ ಪ್ರಾರ್ಥನೆ ಸಲ್ಲಿಸುತ್ತಾರೆ. ಟಿಬೇಟಿಯನ್ನರು ಹುಲಿ ಮುಖವಾಡ ಸೇರಿ ಹಲವು ವೇಷಗಳನ್ನು ಧರಿಸಿ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ.

ಈ ವರ್ಷದ ಆಚರಣೆಯಲ್ಲಿ ಇದೇ ಮೊದಲ ಬಾರಿಗೆ ಶುಕ್ರವಾರ ಬೈಲುಕೊಪ್ಪಕ್ಕೆ ಲಡಾಖ್ ಬಿಜೆಪಿ ಲೋಕಸಭಾ ಸದಸ್ಯ ಜಮ್ಯಮ್ ತ್ಸೇರಿಂಗ್ ನ್ಯಾಮಗಲ್ ಭಾಗಿಯಾಗಿದ್ದು, ವಿಶೇಷವಾಗಿತ್ತು. ಈ ಸಂದರ್ಭ ಮಾತನಾಡಿದ ಅವರು ಟಿಬೇಟಿಯನ್ನರ ಸಮಸ್ಯೆಗಳಿಗೆ ಕರ್ನಾಟಕ ಹಾಗೂ ಭಾರತ ಸರ್ಕಾರ ಎಲ್ಲ ರೀತಿಯಿಂದಲೂ ಸ್ಪಂದಿಸುವುದೆAದು ಭರವಸೆ ನೀಡಿದರು. ಟಿಬೇಟಿಯನ್ನರು ಸ್ಥಳೀಯರ ಜತೆ ಇದೇ ರೀತಿಯ ಉತ್ತಮ ಬಾಂಧವ್ಯವನ್ನು ಮುಂದೆಯೂ ಹೊಂದಬೇಕೆAದು ಅವರು ಕರೆ ನೀಡಿದರು. ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅರುಣಾಚಲ, ಸಿಕ್ಕಿಂ ಹಾಗೂ ಲಡಾಖ್ ಪ್ರಾಂತ್ಯದ ಭಾರತೀಯ ವಿದ್ಯಾರ್ಥಿಗಳನ್ನು ಅವರು ಭೇಟಿ ಮಾಡಿದರು. ನಂತರ ಲೋಕಸಭಾ ಸದಸ್ಯರು ಹುಣಸೂರು ಸಮೀಪದ ಗುರುಪುರ ಕ್ಯಾಂಪಿಗೂ ಭೇಟಿ ನೀಡಿ ಉತ್ತರ ಕನ್ನಡದ ಮುಂಡಗೋಡ ಟಿಬೇಟನ್ ಕ್ಯಾಂಪಿಗೆ ತೆರಳಿದರು.

ಟಿಬೇಟಿಯನ್ನರ ಹೊಸ ವರ್ಷದ ಆಚರಣೆಗೆ ಕಳೆದ ಎರಡು ವರ್ಷಗಳಿಂದ ತಡೆ ಬಿದ್ದಿತ್ತು. ಕೊರೊನಾ ಮಹಾಮಾರಿಯ ಭೀತಿಯಿಂದಾಗಿ ಸರ್ಕಾರ ಎಲ್ಲಾ ಧಾರ್ಮಿಕ ಆಚರಣೆಗಳಿಗೂ ತಡೆ ಹಾಕಿತ್ತು. ಆದರೆ ಕನಿಷ್ಟ ಸಂಖ್ಯೆಯ ಜನರ ಪಾಲ್ಗೊಳ್ಳುವಿಕೆಯೊಂದಿಗೆ ಹಬ್ಬದ ಆಚರಣೆಗೆ ಷರತ್ತುಬದ್ಧ ಅನುಮತಿ ನೀಡಲಾಗಿತ್ತಾದರೂ ಟಿಬೇಟಿಯನ್ನರೇ ಸ್ವಯಂ ನಿರ್ಬಂಧ ವಿಧಿಸಿಕೊಂಡು ಹಬ್ಬ ಆಚರಿಸಲಿಲ್ಲ. ಕಳೆದ ವರ್ಷದ ಕೊರೊನಾ ಸಂದರ್ಭ ಟಿಬೇಟಿಯನ್ನರು ಸಂಕಷ್ಟದಲ್ಲಿದ್ದ ಬಡ ವರ್ಗದವರಿಗೆ ಆಹಾರದ ಕಿಟ್‌ಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದರು. ಇದೀಗ ಕೊರೊನಾ ಸಂಕಷ್ಟ ಕಾಲ ದೂರವಾದ ಕಾರಣ ಅದ್ಧೂರಿಯಾಗಿ ಟಿಬೇಟಿಯನ್ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ.