ಮಡಿಕೇರಿ, ಮಾ. ೫: ಕೊಡಗು ಬ್ಲಡ್ ಡೋನರ್ಸ್ ೩ನೇ ವಾರ್ಷಿಕೋತ್ಸವ ಪ್ರಯುಕ್ತ ಭಾರತೀಯ ಹುತಾತ್ಮ ಯೋಧ ವೀರಾಜಪೇಟೆಯ ಅಲ್ತಾಫ್ ಅಹಮ್ಮದ್ ಅವರ ಸ್ಮರಣಾರ್ಥವಾಗಿ ಮಡಿಕೇರಿಯ ಕಮ್ಯುನಿಟಿ ಹಾಲ್ನಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಬ್ಲಡ್ ಹೆಲ್ಪ್ಲೈನ್ ಕರ್ನಾಟಕ, ನಾಲ್ಕುನಾಡು ಬ್ಲಡ್ ಡೋನರ್ಸ್ ನಾಪೋಕ್ಲು ಹಾಗೂ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಸಹಯೋಗ ದೊಂದಿಗೆ ಶಿಬಿರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಾರತೀಯ ಸೇನೆಯ ನಿವೃತ್ತ ಸುಬೇದಾರ್ ಮೇಜರ್ ಡೇವಿಡ್ ವೇಗಸ್, ವೈಜ್ಞಾನಿಕವಾಗಿ ಜಗತ್ತು ಎಷ್ಟೇ ಮುಂದುವರಿದಿದ್ದರೂ ಮಾನವ ದೇಹದ ಹೊರತಾಗಿ ರಕ್ತ ಉತ್ಪಾದಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಕರೆ ನೀಡಿದರು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ರಕ್ತದಾನ ಮತ್ತೊಬ್ಬರ ಪ್ರಾಣ ಉಳಿಸುವ ಜೊತೆಗೆ ವ್ಯಕ್ತಿ ಆರೋಗ್ಯಯುತ ಜೀವನ ನಡೆಸಲು ಸಹಕಾರಿಯಾಗಿದೆ. ರಕ್ತದ ಅವಶ್ಯಕತೆ ಉಂಟಾದಾಗ ಮಾತ್ರ ಅದರ ಮಹತ್ವ ಪ್ರತಿಯೊಬ್ಬರಿಗೂ ಅರಿವಾಗುತ್ತದೆ. ರಕ್ತದಾನದ ವಿಚಾರದಲ್ಲಿ ಯಾವುದೇ ಜಾತಿ ಧರ್ಮ ಗಣನೆಗೆ ಬರುವುದಿಲ್ಲ ಎಂದರು.
ಡಾ. ಗಾಯತ್ರಿ ಮಾತನಾಡಿ, ಕೆಲವು ರೋಗಿಗಳು ಸಂಪೂರ್ಣವಾಗಿ ರಕ್ತದಾನಿಗಳನ್ನೇ ಅವಲಂಬಿಸಿದ್ದು, ರಕ್ತ ಕೇಂದ್ರಗಳಲ್ಲಿ ನಿರಂತರ ಬೇಡಿಕೆ ಇರುತ್ತದೆ. ಅಪಘಾತವಾದಾಗ, ಗರ್ಭಿಣಿ ಸ್ತಿçÃಯರಲ್ಲಿ, ಕ್ಯಾನ್ಸರ್ ರೋಗಿಗಳಿಗೆ ಮುಖ್ಯವಾಗಿ ರಕ್ತ ಬೇಕಾಗುತ್ತದೆ. ಒಂದು ಯುನಿಟ್ ರಕ್ತದಿಂದ ನಾಲ್ಕು ಜನರ ಪ್ರಾಣ ಉಳಿಸಬಹುದು. ರಕ್ತದಾನ ಮಾಡುವುದರಿಂದ ಯಾವುದೇ ಸಮಸ್ಯೆ ಎದುರಾಗದು ಎಂದು ಮಾಹಿತಿ ನೀಡಿದರು.
ಕೊಡಗು ಬ್ಲಡ್ ಡೋನರ್ಸ್ ಅಧ್ಯಕ್ಷ ಹಾಗೂ ರಕ್ತದಾನಿಯೂ ಆಗಿರುವ ಕ್ರಿಯೇಟಿವ್ ಖಲೀಲ್ ಮಾತನಾಡಿ, ರಕ್ತದಾನ ಮಾಡುವುದು ಇತರರಿಗೆ ಮರುಜನ್ಮ ನೀಡುವ ಸಾರ್ಥಕ ಸೇವೆ. ಯಾರಲ್ಲೂ ಸ್ವಾರ್ಥ ಇರಬಾರದು. ಪ್ರತಿಯೊಬ್ಬರೂ ನಿಸ್ವಾರ್ಥ ಸೇವೆಗೆ ಮುಂದಾಗಬೇಕು ಎಂದರು.
ಬ್ಲಡ್ ಹೆಲ್ಪ್ಲೈನ್ ಕರ್ನಾಟಕದ ಕಾರ್ಯನಿರ್ವಾಹಕ ಶಾಫಿ ಮಾಣಿ ಮಾತನಾಡಿದರು. ಶಿಬಿರದಲ್ಲಿ ಸುಮಾರು ೨೫ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು. ದಾನಿಗಳಿಗೆ ಪಾನೀಯ ಹಾಗೂ ಹಣ್ಣು ಹಂಪಲು ವಿತರಿಸಲಾಯಿತು.
ಬ್ಲಡ್ ಡೋನರ್ಸ್ ಉಪಾಧ್ಯಕ್ಷ ಮೈಕಲ್ ವೇಗಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ಲಡ್ ಹೆಲ್ಪ್ಲೈನ್ ಕರ್ನಾಟಕದ ಕಾರ್ಯನಿರ್ವಾಹಕ ಆಲಿ ಪುತ್ತೂರು, ಚಾಮರಾಜನಗರದ ಮಾಜಿ ಯೋಧ ರೇವಣ್ಣ, ನಗರಸಭೆ ಸದಸ್ಯರಾದ ಬಷೀರ್, ಮೇರಿ ವೇಗಸ್ ಮತ್ತಿತರರು ಇದ್ದರು. ಕಾರ್ಯದರ್ಶಿ ಸುಕುಮಾರ್ ಕಾರ್ಯಕ್ರಮ ನಿರೂಪಿಸಿದರು.