ಪೊನ್ನಂಪೇಟೆ, ಮಾ. ೫: ಜನಾಂಗೀಯ ಸಹೋದರತೆಯ ಪ್ರತೀಕವಾಗಿ ಪ್ರತಿವರ್ಷ ನಡೆಯುವ ಐತಿಹಾಸಿಕ ಕುತ್ತುನಾಡ್ ಉರೂಸ್ (ನೇರ್ಚೆ) ತಾ. ೭ರಂದು ಜರುಗಲಿದೆ. ಬಿ. ಶೆಟ್ಟಿಗೇರಿ ಸಮೀಪದ ಕೊಂಗಣ ಗ್ರಾಮದಲ್ಲಿರುವ ಸೂಫಿಸಂತ ಸೂಫಿ ಶಹೀದ್ ಅವರ ಸ್ಮಾರಕ ಬಿಡಾರದಲ್ಲಿ ಜರುಗಲಿರುವ ಐತಿಹಾಸಿಕ ಕುತ್ತುನಾಡ್ ಉರೂಸ್ ವರ್ಷಂಪ್ರತಿ ಬೇಗೂರು ಮಾಪಿಳ್ಳೆತೋಡು ಕಲ್ಲಾಯಿ ಜುಮಾ ಮಸೀದಿಯ ತಕ್ಕ ಮುಖ್ಯಸ್ಥರು-ಆಡಳಿತ ಮಂಡಳಿ ಹಾಗೂ ಕೊಂಗಣ ಗ್ರಾಮದ ತಕ್ಕ ಮುಖ್ಯಸ್ಥರ- ಗ್ರಾಮಸ್ಥರ ಜಂಟಿ ಆಶ್ರಯದಲ್ಲಿ ಜರುಗುವುದು ಇದರ ವಿಶೇಷವಾಗಿದೆ.
ಕಾರ್ಯಕ್ರಮದಂದು ಬೆಳಿಗ್ಗೆ ಬೇಗೂರು ಮಾಪಿಳ್ಳೆತೋಡು ತಕ್ಕ ಮುಖ್ಯಸ್ಥರಾದ ಆಲೀರ ಎಸ್. ಖಾಲಿದ್ ಮತ್ತು ಕೊಂಗಣದ ತಕ್ಕಮುಖ್ಯಸ್ಥರಾದ ಕರ್ತೂರ ಕೆ. ದೇವಯ್ಯ ಅವರು ಜಂಟಿಯಾಗಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ನಂತರ ನಡೆಯುವ ಸಾಮೂಹಿಕ ಪ್ರಾರ್ಥನೆಗೆ ಬೇಗೂರು ಮಾಪಿಳ್ಳೆತೋಡು ಕಲ್ಲಾಯಿ ಜುಮಾ ಮಸೀದಿಯ ಖತೀಬರಾದ ಅಬ್ದುಲ್ ರಝಾಕ್ ಸಖಾಫಿ ಅವರು ನೇತೃತ್ವ ನೀಡಲಿದ್ದಾರೆ. ಇದಾದ ಬಳಿಕ ಕುತ್ತುನಾಡ್ ಉರೂಸ್‌ನ ವಿಶೇಷಗಳಲ್ಲಿ ಒಂದಾದ ಹಾಲನ್ನ ಪ್ರಸಾದ ವಿತರಣೆ, ಭಂಡಾರ ಜಮಾಯಿಸುವುದು, ಸಭಾ ಕಾರ್ಯಕ್ರಮ, ಮೌಲೂದ್ ಪಾರಾಯಣ, ಭಂಡಾರವಾಗಿ ಬಂದ ವಸ್ತುಗಳ ಹರಾಜು ಪ್ರಕ್ರಿಯೆ ಸೇರಿದಂತೆ ಕೊನೆಯಲ್ಲಿ ಪಾಲ್ಗೊಳ್ಳುವ ಸರ್ವರಿಗೂ ಸಾಮೂಹಿಕ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.